ಹುಬ್ಬಳ್ಳಿ:ಪ್ರಸಕ್ತ ಸಾಲಿನ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ನೈಋತ್ಯ ರೈಲ್ವೆಗೆ 6,493.87 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಕೇಂದ್ರದಿಂದ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ಮಂಜೂರು ಆಗುವ ಸರಾಸರಿ ಅನುದಾನದಲ್ಲಿ ಏರಿಕೆಯಾಗಿದೆ.
ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ರೈಲು ನಿಲ್ದಾಣಗಳ ಆಧುನೀಕರಣ, ಮೂಲ ಸೌಕರ್ಯಗಳ ಅಭಿವೃದ್ಧಿ, ಪ್ರಯಾಣಿಕರ ಸುರಕ್ಷತೆ ಹಾಗೂ ಸೌಕರ್ಯ ಸುಧಾರಣೆಗೆ ನೈಋತ್ಯ ರೈಲ್ವೆ ಆದ್ಯತೆ ನೀಡುತ್ತ ಬಂದಿದೆ. 1,448.89 ಕೋಟಿ ರೂ.ಗಳನ್ನು ಹೊಸ ಮಾರ್ಗ ನಿರ್ಮಾಣಕ್ಕೆ, 1,241 ಕೋಟಿ ರೂ.ಗಳನ್ನು ಜೋಡಿ ಮಾರ್ಗ ನಿರ್ಮಾಣಕ್ಕೆ, 961.22 ಕೋಟಿ ರೂ.ಗಳನ್ನು ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ಒದಗಿಸಲು ಯೋಜಿಸಲಾಗಿದೆ.
ಇನ್ನು ಹೊಸ ಮಾರ್ಗದ ಯೋಜನೆಗಳಾದ ಗದಗ-ವಾಡಿ (200 ಕೋಟಿ ರೂ.), ತುಮಕೂರು-ದಾವಣಗೆರೆ (ಚಿತ್ರದುರ್ಗ ಮೂಲಕ) (150 ಕೋಟಿ), ತುಮಕೂರು ರಾಯದುರ್ಗ (ಕಲ್ಯಾಣದುರ್ಗ ಮೂಲಕ) (250 ಕೋಟಿ), ಬಾಗಲಕೋಟ-ಕುಡಚಿ (150 ಕೋಟಿ), ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರ (150 ಕೋಟಿ), ಬೆಳಗಾವಿ -ಧಾರವಾಡ (ಕಿತ್ತೂರ ಮೂಲಕ) (20 ಕೋಟಿ), ಮರಿಕುಪ್ಪಮ-ಕುಪ್ಪಮ (60 ಕೋಟಿ), ಕಡೂರ-ಚಿಕ್ಕಮಗಳೂರು-ಹಾಸನ (70 ಕೋಟಿ), ಮಾಲಗುರ-ಪಾಳಸಮುದ್ರ (21 ಕೋಟಿ), ಹಾಸನ ಬೆಂಗಳೂರು (ಶ್ರವಣಬೆಳಗೂಳ ಮೂಲಕ) (20 ಕೋಟಿ), ಹುಬ್ಬಳ್ಳಿ-ಅಂಕೋಲಾ (20 ಕೋಟಿ), ಮುನಿರಾಬಾದ-ಮಹಬೂಬನಗರ (100 ಕೋಟಿ), ಗದಗ-ಯಲವಿಗಿ (150 ಕೋಟಿ).
ಜೋಡಿ ಮಾರ್ಗ ನಿರ್ಮಾಣದ ಯೋಜನೆಗಳು: ಗದಗ-ಹೊಟಗಿ (170 ಕೋಟಿ), ಪೆಣಕುಂಡಾ-ಧರ್ಮಾವರಮ್ (100 ಕೋಟಿ), ಬೈಯಪ್ಪನಹಳ್ಳಿ -ಹೊಸೂರ (200 ಕೋಟಿ), ಯಶವಂತಪುರ- ಚನ್ನಸಂದ್ರಾ (100 ಕೋಟಿ), ಹುಬ್ಬಳ್ಳಿ ಚಿಕ್ಕಜಾಜೂರ (25 ಕೋಟಿ), ಬೆಂಗಳೂರು ಕಂಟೋನ್ಮಂಟ್-ವೈಟ್‌ಫೀಲ್ಡ್ ಕ್ವಾಡ್ರಪ್ಲಿಂಗ್ (200 ಕೋಟಿ), ಹೊಸಪೇಟೆ- ತಿನೈಘಾಟ್-ವಾಸ್ಕೊ (400 ಕೋಟಿ), ಯಲಹಂಕ-ಪಣಕುಂಡಾ (20 ಕೋಟಿ), ಅರಸಿಕೆರೆ-ತುಮಕೂರು (20 ಕೋಟಿ). ರೈಲ್ವೆ ಮೇಲ್ಸೆತುವೆ, ಕೆಳ ಸೇತುವೆಗಳಿಗಾಗಿ 349.40 ಕೋಟಿ, ಸಂಚಾರ ಸೌಲಭ್ಯ ಕಾಮಗಾರಿಗೆ 145.84 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ, ವೇಗದ ಮತ್ತು ಸುರಕ್ಷಿತ ಸರಕು ಸಾಗಣೆ, ಪ್ರಯಾಣಿಕರಿಗೆ ಗುಣಮಟ್ಟದ ಸೇವೆಗಳನ್ನು ಒದಗಿಸಲು ಯೋಜನೆಗಳನ್ನು ಮುಂದುವರಿಸಲಾಗುವುದು ಎಂದು ನೈಋತ್ಯ ರೈಲ್ವೆ ವಲಯದ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಮೈಸೂರು ದಸರಾ 2024 : ನಾಳೆಯಿಂದ ಗಜಪಯಣ, ಮೊದಲ ಬಾರಿಗೆ ಏಕಲವ್ಯ ಭಾಗಿ - Mysuru Dussehra 2024