ಬೆಳಗಾವಿ:ಆ ಊರಲ್ಲಿ ಈವರೆಗೂ ಯಾರೊಬ್ಬರೂ ವಿಮಾನ ಹತ್ತಿದವರಿಲ್ಲ. ಮಕ್ಕಳಿಗೆ ಮಾತ್ರ ತಾವು ಒಂದು ದಿನ ವಿಮಾನದಲ್ಲಿ ಹಾರಾಡಬೇಕು ಎಂಬ ಆಸೆ ಇದೆ, ಆದರೆ ಹಣದ ಕೊರತೆಯಿಂದ ಅದು ಸಾಧ್ಯವಾಗುತ್ತಿಲ್ಲ. ಇದನ್ನರಿತ ಓರ್ವ ಶಿಕ್ಷಕರು ತಮ್ಮ ಸ್ವಂತ ಹಣದಲ್ಲಿಯೇ ಮಕ್ಕಳನ್ನು ವಿಮಾನದ ಮೂಲಕ ಹೈದಾರಾಬಾದ್ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ.
ಬೆಳಗಾವಿ ತಾಲೂಕಿನ ಸೋನಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ 17 ವಿದ್ಯಾರ್ಥಿಗಳು ಇದೇ ಮೊದಲ ಬಾರಿಗೆ ವಿಮಾನದ ಮೂಲಕ ಪ್ರವಾಸ ಕೈಗೊಂಡಿದ್ದಾರೆ. ಇದಕ್ಕೆ ಕಾರಣೀಭೂತರು ಇದೇ ಶಾಲೆಯ ಶಿಕ್ಷಕ ಪ್ರಕಾಶ ದೇಯಣ್ಣವರ.
ಹೈದರಾಬಾದ್ ಪ್ರವಾಸದಲ್ಲಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು. (ETV Bharat) ಸರ್ಕಾರಿ ಶಾಲೆಯ ಮಕ್ಕಳನ್ನು ಪ್ರೋತ್ಸಾಹಿಸಿ ಹಾಜರಾತಿ ಹೆಚ್ಚಿಸುವ ಉದ್ದೇಶದಿಂದ ಒಂದು ವರ್ಷದ ಮೊದಲು ಈ ರೀತಿಯ ವಿಮಾನ ಪ್ರವಾಸದ ಆಫರ್ ಅನ್ನು ಶಿಕ್ಷಕ ಪ್ರಕಾಶ ದೇಯಣ್ಣವರ ನೀಡಿದ್ದರು. ಕೊಟ್ಟ ಮಾತಿನಂತೆ ನಿನ್ನೆ (ಗುರುವಾರ) 17 ವಿದ್ಯಾರ್ಥಿನಿ, ವಿದ್ಯಾರ್ಥಿನಿಯರನ್ನು ಕರೆದುಕೊಂಡು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ಹೈದರಾಬಾದ್ಗೆ ಪ್ರಯಾಣ ಬೆಳೆಸಿದರು. ತಮ್ಮ ಮಕ್ಕಳನ್ನು ಪೋಷಕರು ಖುಷಿಯಿಂದ ಬೀಳ್ಕೊಟ್ಟರು.
ಹೈದರಾಬಾದ್ ಪ್ರವಾಸಕ್ಕೆ ಒಟ್ಟು 2.50 ಲಕ್ಷ ರೂ. ಖರ್ಚಾಗುತ್ತಿದ್ದು, ಇದರಲ್ಲಿ 2 ಲಕ್ಷ ರೂಪಾಯಿ ಹಣವನ್ನು ಶಿಕ್ಷಕ ಪ್ರಕಾಶ ದೇಯಣ್ಣವರ ಭರಿಸುತ್ತಿದ್ದಾರೆ. ಇನ್ನುಳಿದ ಹಣವನ್ನು ವಿದ್ಯಾರ್ಥಿಗಳಿಂದ ತಲಾ 3 ಸಾವಿರ ರೂ.ಯಂತೆ ಪಡೆಯಲಾಗಿದೆ. ನಿಯಮಿತವಾಗಿ ಶಾಲೆಗೆ ಬರುತ್ತಿದ್ದ 17 ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ.
ಹೈದರಾಬಾದ್‌ನಲ್ಲಿ ರಾಮೋಜಿ ಫಿಲ್ಮ್ ಸಿಟಿ, ಚಾರ್ಮಿನಾರ್, ಗೋಲ್ಕೊಂಡ ಕೋಟೆ, ಸಲಾರ್ ಜಂಗ್ ಮ್ಯೂಸಿಯಂ ಸೇರಿ ಮತ್ತಿತರ ಸ್ಥಳಗಳನ್ನು ವಿದ್ಯಾರ್ಥಿಗಳು ಎರಡು ದಿನಗಳಲ್ಲಿ ವೀಕ್ಷಿಸಲಿದ್ದಾರೆ.
ಶಿಕ್ಷಕ ಪ್ರಕಾಶ ದೇಯಣ್ಣವರ (ETV Bharat) ಶಿಕ್ಷಕ ಪ್ರಕಾಶ ದೇಯಣ್ಣವರ ಈಟಿವಿ ಭಾರತದ ಜೊತೆಗೆ ಮಾತನಾಡಿ, "ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ಇರಲಿಲ್ಲ. ಹೀಗಾಗಿ, ಮಕ್ಕಳ ಹಾಜರಾತಿ ಸಂಖ್ಯೆ ಕೂಡ ಕಡಿಮೆ ಇತ್ತು. ಹಾಗಾಗಿ, ವಿದ್ಯಾರ್ಥಿಗಳಲ್ಲಿ ವಿಮಾನ ಪ್ರವಾಸದ ಆಸೆ ಹುಟ್ಟಿಸಿದೆವು. ಇದಾದ ಬಳಿಕ ಮಕ್ಕಳ ಹಾಜರಾತಿ ಹೆಚ್ಚಾಗಿದೆ. ಈ ಪೈಕಿ ನಿಯಮಿತವಾಗಿ ಶಾಲೆಗೆ ಬಂದ 17 ವಿದ್ಯಾರ್ಥಿಗಳನ್ನು ವಿಮಾನದಲ್ಲಿ ಹೈದರಾಬಾದ್ಗೆ ಕರೆದುಕೊಂಡು ಹೋಗುತ್ತಿದ್ದೇವೆ" ಎಂದು ಹೇಳಿದರು.
ನಿರಂತರ ಹಾಜರಾತಿಗೆ ಪ್ರವಾಸದ ಅವಕಾಶ:ಪ್ರವಾಸಕ್ಕೆ ಹೊರಟಿದ್ದ ವಿದ್ಯಾರ್ಥಿನಿ ಸಂಸ್ಕೃತಿ ಪತ್ತಾರ ಮಾತನಾಡಿ, "ಆಕಾಶದಲ್ಲಿ ವಿಮಾನ ಹಾರಾಡುವುದು ನೋಡಿದ್ದೆ. ನಾನೂ ವಿಮಾನ ಪ್ರಯಾಣ ಮಾಡಬೇಕು ಎಂದು ಆಸೆಪಟ್ಟಿದ್ದೆ. ಈಗ ನಮ್ಮ ಶಾಲೆಯ ಪ್ರಕಾಶ ದೇಯಣ್ಣವರ ಸರ್ ನಮ್ಮ ಆಸೆ ಈಡೇರಿಸುತ್ತಿದ್ದಾರೆ. ತುಂಬಾ ಖುಷಿಯಾಗುತ್ತಿದೆ. ನಾನು ಒಂದು ದಿನವೂ ಶಾಲೆ ತಪ್ಪಿಸದೇ ಬಂದಿದ್ದೇನೆ. ಹಾಗಾಗಿ, ನನಗೆ ಈ ಪ್ರವಾಸದ ಭಾಗ್ಯ ಸಿಕ್ಕಿದೆ" ಎಂದರು.
ಮತ್ತೋರ್ವ ವಿದ್ಯಾರ್ಥಿ ಶಿವಪ್ರಸಾದ ಮಾತನಾಡಿ, "ನಮ್ಮೂರಲ್ಲೇ ಯಾರೂ ವಿಮಾನ ಹತ್ತಿಲ್ಲ. ನಮನಗೆ ಈ ಅವಕಾಶ ಸಿಕ್ಕಿರುವುದಕ್ಕೆ ಬಹಳ ಖುಷಿಯಾಗುತ್ತಿದೆ. ಈರಣ್ಣ ದೇಯಣ್ಣವರ ಸರ್ ಕೃಪೆಯಿಂದ ವಿಮಾನಯಾನ ಮಾಡುತ್ತಿದ್ದೇವೆ. ಅವರಿಗೆ ತುಂಬಾ ಧನ್ಯವಾದ ಸಲ್ಲಿಸುತ್ತೇನೆ. ಈ ಪ್ರವಾಸ ಮುಗಿದ ಮೇಲೂ ನಾನು ರೆಗ್ಯೂಲರ್ ಆಗಿ ಶಾಲೆಗೆ ಹೋಗುತ್ತೇನೆ" ಎಂದು ಹೇಳಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ಸೋನಟ್ಟಿ (ETV Bharat) "ಈ ಪ್ರವಾಸದ ಯಶಸ್ಸಿಗೆ ಪ್ರಕಾಶ್ ದೇಯಣ್ಣವರ ಅವರು 1 ವರ್ಷದಿಂದ ಅವಿರತ ಶ್ರಮಿಸಿದ್ದಾರೆ. ತಮ್ಮ ಕುಟುಂಬಕ್ಕೆ ಕೊರತೆಯಾದರೂ ವಿದ್ಯಾರ್ಥಿಗಳ ಪ್ರವಾಸಕ್ಕೆ 2 ಲಕ್ಷ ರೂ. ಹಣ ಹೊಂದಿಸಿದ್ದಾರೆ. ಈ ಮೂಲಕ ಸರ್ಕಾರಿ ಶಾಲೆಯ ಮಕ್ಕಳಿಗೆ ಒಳ್ಳೆಯ ಅನುಭವ ತಂದುಕೊಡುತ್ತಿದ್ದಾರೆ. ಸೋನಟ್ಟಿ ಶಾಲೆ ಐದು ವರ್ಷಗಳ ಹಿಂದೆ ತೀರಾ ಹಿಂದುಳಿದಿತ್ತು. ಈಗ ಅವರ ಪರಿಶ್ರಮದಿಂದ ಅಭಿವೃದ್ಧಿ ಕಂಡಿದೆ. ಇವರ ಕಾರ್ಯ ಬೇರೆ ಶಾಲೆಗಳಿಗೂ ಪ್ರೇರಣೆಯಾಗಲಿ. ಉದ್ಯಮಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಲಿ" ಎನ್ನುತ್ತಾರೆ ಶಿಕ್ಷಕ ರಮೇಶ ಗೋಣಿ.
ಇದನ್ನೂ ಓದಿ:ಬೆಳಗಾವಿ ಟು ಲಂಡನ್: ರಾಣಿ ಚನ್ನಮ್ಮ ವಿವಿಯ 5 ವಿದ್ಯಾರ್ಥಿಗಳಿಗೆ ವಿದೇಶ ಪ್ರವಾಸದ ಅವಕಾಶ