ಕೊಡಗು:ನಿಶ್ಚಿತಾರ್ಥ ಮುಂದೂಡಿಕೆಯಾದ ಕೋಪಕ್ಕೆಯುವಕನೋರ್ವ16 ವರ್ಷದಅಪ್ರಾಪ್ತ ಬಾಲಕಿಯ ತಲೆ ಕಡಿದು ಭೀಕರವಾಗಿ ಹತ್ಯೆಗೈದಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಸೋಮವಾರಪೇಟೆಯ ಸುರ್ಲಬ್ಬಿಯಲ್ಲಿ ಗುರುವಾರ ನಡೆದಿದೆ. 32 ವರ್ಷದ ಪ್ರಕಾಶ್ (32) ಎಂಬ ಆರೋಪಿ ಕೃತ್ಯ ಎಸಗಿ, ಬಳಿಕ ಬಾಲಕಿಯ ರುಂಡದ ಜೊತೆಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಿಶ್ಚಿತಾರ್ಥ ಮುರಿದು ಬಿದ್ದಿದ್ದಕ್ಕೆ ಕೋಪ:ಗುರುವಾರ ಆರೋಪಿ ಪ್ರಕಾಶ್ ಮತ್ತು ಬಾಲಕಿಯ ನಿಶ್ಚಿತಾರ್ಥ ನಿಶ್ಚಯವಾಗಿತ್ತು. ಅಪ್ರಾಪ್ತೆಯ ನಿಶ್ಚಿತಾರ್ಥದ ಬಗ್ಗೆ ಮಾಹಿತಿ ಅರಿತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಾಲಕಿಯ ಮನೆಗೆ ಆಗಮಿಸಿದ್ದರು. ಬಳಿಕ ಎರಡೂ ಕುಟುಂಬಸ್ಥರ ಪೋಷಕರ ಮನವೊಲಿಸಿದ್ದರು. ಇದರಿಂದಾಗಿ ಬಾಲಕಿ 18 ವರ್ಷ ದಾಟಿದ ಬಳಿಕ ಪ್ರಕಾಶ್ ಜೊತೆ ಮದುವೆ ಮಾಡುವುದಾಗಿ ಎರಡೂ ಮನೆಯ ಪೋಷಕರು ಒಪ್ಪಿಕೊಂಡಿದ್ದರು. ಆ ಬಳಿಕ ಅಧಿಕಾರಿಗಳು ಮತ್ತು ಯುವಕನ ಮನೆಯವರು ಬಾಲಕಿಯ ಮನೆಯಿಂದ ತೆರಳಿದ್ದರು. ಇದರಿಂದ ಕೋಪಗೊಂಡಿದ್ದ ಯುವಕ ಸಾಯಂಕಾಲ 5.30ರ ವೇಳೆಗೆ ಬಾಲಕಿಯ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಬಾಲಕಿಯ ಪೋಷಕರ ಮೇಲೆ ಹಲ್ಲೆ ಮಾಡಿದ್ದ. ಬಳಿಕ ಬಾಲಕಿಯನ್ನು ಮನೆಯಿಂದ 100 ಮೀಟರ್ ವರೆಗೆ ಎಳೆದೊಯ್ದಿದ್ದಾನೆ. ಅಲ್ಲಿ ಬಾಲಕಿಯ ತಲೆ ಕಡಿದು ಹತ್ಯೆ ಮಾಡಿ, ದೇಹವನ್ನು ಅಲ್ಲೆ ಬಿಟ್ಟು ತಲೆಯನ್ನು ತನ್ನೊಂದಿಗೆ ತೆಗೆದುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.