ಚಿಕ್ಕಮಗಳೂರು :ಕಳೆದ 8 ದಿನಗಳಿಂದ ಚಿಕ್ಕಮಗಳೂರಿನಲ್ಲಿ ಆನೆ ಬೀಟಮ್ಮ ಅಂಡ್ ಗ್ಯಾಂಗ್ನ ಸದ್ದು ಹೆಚ್ಚಾಗುತ್ತಿದೆ. ಇದು ಜಿಲ್ಲೆಯ ಸುತ್ತ ಮುತ್ತಲ ಜನರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ. ಬೀಟಮ್ಮ ಗ್ಯಾಂಗ್ನಲ್ಲಿ ಒಟ್ಟು 25ಕ್ಕೂ ಹೆಚ್ಚು ಕಾಡಾನೆಗಳು ಇದ್ದು, ಇದೀಗ ಚಿಕ್ಕಮಗಳೂರು ತಾಲೂಕಿನ ಕೆರೆ ಮಕ್ಕಿಯಿಂದ ಆವತಿ ಭಾಗದ ಕಡೆ ಪ್ರಯಾಣ ಬೆಳೆಸಿದೆ. ಈಗ ಮಸಗಲಿ ಗ್ರಾಮದ ಕಡೆ ಹೋಗುವ ಬೆಟ್ಟವನ್ನು ಈ ಗ್ಯಾಂಗ್ ಏರುತ್ತಿದ್ದು, ಒಂದರ ಹಿಂದೆ ಒಂದು ಹಿಂಬಾಲಿಸಿಕೊಂಡು ಗಜಪಡೆ ಹೋಗಲು ಪ್ರಾರಂಭ ಮಾಡಿದೆ.
ಕಾಡಾನೆಗಳ ವಿಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿದಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ಹೆಚ್ಚಾಗಿದೆ. 3 ದಿನದ ಹಿಂದೆ ಕಾಫಿ ತೋಟದ ಮಾಲೀಕರು ತಮ್ಮ ಕಾರ್ಮಿಕರಿಗೆ ರಜೆ ಘೋಷಣೆ ಮಾಡಿದ್ದು, ಮನೆಯಿಂದ ಹೊರ ಬರಲು ಸ್ಥಳೀಯರು ಹಿಂದೇಟು ಹಾಕುತ್ತಿದ್ದಾರೆ.