ಹಾವೇರಿ: ಇಬ್ಬರು ಮಕ್ಕಳಿಗೆ ವಿಷವುಣಿಸಿ ಬಳಿಕ ತಂದೆಯೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿ ತಾಲೂಕಿನ ಹಳೇರಿತ್ತಿ ಗ್ರಾಮದಲ್ಲಿ ನಡೆದಿದೆ. ಹಳೇರಿತ್ತಿಯ 42 ವರ್ಷದ ನಾಗೇಶ ಪವಾಡೆಪ್ಪರ ಮತ್ತು ಅವರ ಇಬ್ಬರು ಮಕ್ಕಳಿಗೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಹುಬ್ಬಳ್ಳಿಯ ಕಿಮ್ಸ್ಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ.
ಹೆಂಡತಿ ಮಕ್ಕಳನ್ನು ಊರಲ್ಲೇ ಬಿಟ್ಟು ನಾಗೇಶ ದುಡಿಯಲು ಬೇರೆ ಕಡೆ ಹೋಗಿದ್ದರು. ಈಗ ಗ್ರಾಮಕ್ಕೆ ಬಂದಿದ್ದು, ಪತ್ನಿ ಜೊತೆ ಹಣದ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದರು. ಬಳಿಕ 10 ವರ್ಷದ ಮಗ, 8 ವರ್ಷದ ಮಗಳನ್ನು ಊರ ಹೊರಗಡೆ ಕರೆದುಕೊಂಡು ಹೋಗಿ ಅವರಿಗೆ ವಿಷವುಣಿಸಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಸಂಬಂಧಿಕರೊಬ್ಬರು ತಿಳಿಸಿದ್ದಾರೆ.
ಇನ್ನೊಂದೆಡೆ ನಾಗೇಶ್ ಕೆಲ ಸಂಘಗಳಲ್ಲಿ ಸಾಲ ಮಾಡಿಕೊಂಡಿದ್ದರು. ಇದರಿಂದಾಗಿ ಸಾಲ ಪಾವತಿಸುವಂತೆ ಸಾಲಗಾರರು ಕಿರುಕುಳ ನೀಡಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ ಎಂದು ಸಂಬಂಧಿಕರು ಶಂಕಿಸಿದ್ದಾರೆ. ಗುತ್ತಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಸಾಲಗಾರರ ಕಿರುಕುಳಕ್ಕೆ ಆತ್ಮಹತ್ಯೆ ಯತ್ನ: ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಸಾಲಗಾರರ ಕಿರುಕುಳಕ್ಕೆ ಬೇಸತ್ತ ವ್ಯಕ್ತಿಯೊರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನ 32 ವರ್ಷದ ದಾದಾಪೀರ್ ತಿಳುವಳ್ಳಿ ಎಂದು ಗುರುತಿಸಲಾಗಿದೆ.