ರಾಮನಗರ:ಕಾಡಾನೆ ದಾಳಿಯಲ್ಲಿ ರೈತನೋರ್ವ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಉಯ್ಯಂಬಹಳ್ಳಿ ಹೋಬಳಿಯ ಹಗ್ಗನೂರುದೊಡ್ಡಿ ಗ್ರಾಮದಲ್ಲಿ ಭಾನುವಾರ ನಸುಕಿನ ಜಾವ 2 ಗಂಟೆಯ ಸುಮಾರಿಗೆ ನಡೆದಿದೆ. ಕರಿಯಪ್ಪ (75) ಮೃತ ರೈತ ಎಂದು ಗುರುತಿಸಲಾಗಿದೆ.
ಗ್ರಾಮದ ಹೊರವಲಯದಲ್ಲಿರುವ ತಮ್ಮ ಹೊಲಕ್ಕೆ ರಾಗಿ ಬೆಳೆ ಕಾವಲು ಕಾಯಲು ಹೋಗಿದ್ದರು. ಈ ವೇಳೆ ಕಾಡಾನೆ ದಾಳಿ ಮಾಡಿ, ರೈತನನ್ನು ತುಳಿದಿದೆ. ಪರಿಣಾಮವಾಗಿ ರೈತ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಅಕ್ಕಪಕ್ಕದ ಹೊಲದಲ್ಲಿದ್ದ ರೈತರು ಮಾಹಿತಿ ನೀಡಿದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ, ರೈತನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಈ ಸಂಬಂಧ ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪದೇ ಪದೇ ಆನೆಗಳ ದಾಳಿಯಿಂದಾಗಿ ಈ ಭಾಗದ ರೈತರು ನರಳುತ್ತಿದ್ದು, ಆನೆ ದಾಳಿಗೆ ಶಾಶ್ವತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದರು.
ಜಮೀನಿಗೆ ನುಗ್ಗಿದ ಕಾಡಾನೆ: ಬೆಳೆ ಹಾನಿ
ಇನ್ನೊಂದೆಡೆಕೈಲಂಚ ಹೋಬಳಿ ಕಿರನಕಲ್ಲುದೊಡ್ಡಿ ಗ್ರಾಮದಲ್ಲಿ ಜಮೀನುಗಳಿಗೆ ನುಗ್ಗಿ ಕಾಡಾನೆ ದಾಳಿ ಮಾಡಿದೆ. ಪರಿಣಾಮವಾಗಿ ಲಕ್ಷಾಂತರ ಬೆಲೆಯ ಬೆಳೆ ಹಾನಿಯಾಗಿದೆ. ರೈತರ ಜಮೀನುಗಳಲ್ಲಿ ಆನೆ ಹಾವಳಿ ನಿರಂತರವಾಗಿದೆ. ಇಂದು ಏಕಾಏಕಿ ನಾಲ್ಕೈದು ಆನೆಗಳು ದಾಳಿ ನಡೆಸಿ 25ಕ್ಕೂ ಹೆಚ್ಚು ತೆಂಗಿನ ಮರ, ಬಾಳೆ ಹಾಗೂ ರಾಗಿ ಹೊಲಗಳನ್ನ ಸಂಪೂರ್ಣವಾಗಿ ಹಾನಿಗೊಳಿಸಿವೆ.
ಆನೆಗಳು ದಾಳಿ ನಡೆಸುತ್ತಿದ್ದರೂ ಅರಣ್ಯಾಧಿಕಾರಿಗಳು ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ವಿಫಲರಾಗಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ನಾಲ್ಕೈದು ಕಾಡಾನೆಗಳು ಏಕಾಏಕಿ ದಾಳಿ ಮಾಡಿದ ಹಿನ್ನೆಲೆಯಲ್ಲಿ ಬೆಳೆ ಸಂಪೂರ್ಣ ಹಾನಿಯಾಗಿದೆ. ಕಳೆದ ರಾತ್ರಿ ಕೂಡ ಕೈಲಂಚ ಹೋಬಳಿಗೆ ಸೇರಿದ ಗ್ರಾಮಗಳಲ್ಲಿ ಆನೆಗಳು ದಾಳಿ ನಡೆಸಿ ಇನ್ನೇನು ಕಟಾವಿಗೆ ಬಂದಿದ್ದ ರಾಗಿ ಬೆಳೆಯನ್ನ ನಾಶಪಡಿಸಿವೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಕೊಳ್ಳೇಗಾಲದಲ್ಲಿ ಮಧ್ಯರಾತ್ರಿ ಆನೆಗಳ ಓಡಾಟ: ಸಿಸಿಟಿವಿ ದೃಶ್ಯ
ಇದನ್ನೂ ಓದಿ: ಬಾಳೆಹೊನ್ನೂರು ಮಠಕ್ಕೆ ರೋಬೋಟಿಕ್ ಆನೆ ಉಡುಗೊರೆ ನೀಡಿದ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ದಂಪತಿ