ಧಾರವಾಡ:ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಹಿನ್ನೆಲೆ ರಾಜ್ಯದೆಲ್ಲೆಡೆ ಬರಗಾಲ ಆವರಿಸಿದೆ. ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಿರುವಾಗ ಪ್ರಗತಿಪರ ರೈತನೋರ್ವ ಬರಗಾಲದ ಮಧ್ಯೆಯೂ ಪರ್ಪಲ್ ಗೋಧಿ ಬೆಳೆದು ಸೈ ಎನಿಸಿಕೊಂಡಿದ್ದಾರೆ. ಇವರು ವಿದೇಶ ತಳಿಯ ಗೋಧಿ ಬೆಳೆದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಹೌದು, ಧಾರವಾಡ ತಾಲೂಕಿನ ಕಣವಿ ಹೊನ್ನಾಪುರ ಗ್ರಾಮದ ಬಸನಗೌಡ ಪಾಟೀಲ ಎಂಬುವರ ಜಮೀನಿನಲ್ಲಿ ಬೆಳೆದ ಅಪರೂಪದ ಗೋಧಿ ಬೆಳೆ ಇದಾಗಿದೆ. ಈ ತಳಿಯ ಮೂಲ ಪೂರ್ವ ಆಫ್ರಿಕಾದ್ದು ಎಂದು ಹೇಳಲಾಗಿದೆ. ಬೇರೆ ಬೇರೆ ಬೆಳೆಗಳನ್ನು ಬೆಳೆಯೋಣ ಎಂದು ಇವರ ಪರಿಚಯದ ತಳಿ ತಜ್ಞರೊಬ್ಬರು ಇವರಿಗೆ ಸಲಹೆ ನೀಡಿದ್ದರಂತೆ. ಅದಕ್ಕೆ ಒಪ್ಪಿಕೊಂಡು, 20 ಗುಂಟೆಯಲ್ಲಿ ಈ ಗೋಧಿ ಬಿತ್ತನೆ ಮಾಡಿದ್ದರು ರೈತ ಬಸನಗೌಡ ಪಾಟೀಲ. ‘ಈ ಸಲ ಬೋರವೆಲ್ನಲ್ಲಿಯೂ ನೀರಿಲ್ಲ. ಮಳೆಯೂ ಆಗಿಲ್ಲ. ಆದರೆ ಕಡಿಮೆ ನೀರಿನಲ್ಲಿ ಗೋಧಿ ಉತ್ತಮ ಫಸಲಿನ ನಿರೀಕ್ಷೆ ಮೂಡಿಸಿದೆ’ ಎಂದು ರೈತ ಬಸನಗೌಡ ಪಾಟೀಲ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಬಸನಗೌಡ ರೈತನಿಗೆ ಇಂತಹ ಒಂದು ತಳಿ ಬೆಳೆಯೋಣ ಅನ್ನೋ ಹುಮ್ಮಸ್ಸು ನೀಡಿ, ಈ ವಿಶೇಷ ಗೋಧಿಯ ತಳಿ ಸಹ ತಂದುಕೊಟ್ಟವರು ಮೃತ್ಯುಂಜಯ ವಸ್ತ್ರದ ಎಂಬುವರು. ವೃತ್ತಿಯಿಂದ ಖಾಸಗಿ ಕಾಲೇಜಿನಲ್ಲಿ ಪ್ರೊಫೆಸರ್ ಮತ್ತು ವಕೀಲರಾಗಿರುವ ಇವರು ಗೋಧಿ ಮತ್ತು ಜೋಳದ ವಿಶೇಷ ತಳಿಗಳನ್ನು ತರಿಸಿಕೊಂಡು ಬೇರೆ ಬೇರೆ ರೈತರ ಜಮೀನಿನಲ್ಲಿ ಬೆಳೆಯುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾರೆ.