ಬೆಂಗಳೂರು: ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಕಾರ್ಯಪಡೆ ರಚಿಸಲು ನಿರ್ಧರಿಸಲಾಗಿದ್ದು, ಈ ತಿಂಗಳೊಳಗೆ ಗುಂಡಿ ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು ಸಿಟಿ ರೌಂಡ್ಸ್ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ಉದ್ದೇಶಿ ಮಾತನಾಡಿದ ಅವರು, ಬೆಂಗಳೂರಿನ ವಾರ್ಡ್ ರಸ್ತೆಗಳಲ್ಲಿ 5,500 ಗುಂಡಿ ಬಿದ್ದಿದೆ. ಇದಲ್ಲದೇ ಆರ್ಟಿಲರಿ, ಸಬ್ ಆರ್ಟಿಲರಿ ರಸ್ತೆಗಳಲ್ಲಿ 557 ಗುಂಡಿ ಬಿದ್ದಿವೆ. 67 ಕಡೆ ರಸ್ತೆ ಕಿತ್ತು ಹೋಗಿವೆ. ಬಿಜೆಪಿ ಕಾಲದಿಂದಲೂ ಈ ಗುಂಡಿಗಳು ಇವೆ. ಗುಂಡಿ ಬಿದ್ದ ತಕ್ಷಣ ಮುಚ್ಚಿದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಈ ತಿಂಗಳ ಒಳಗೆ ರಸ್ತೆ ಗುಂಡಿ ಮುಚ್ಚಲು ಸೂಚಿಸಲಾಗಿದೆ. ಕಾರ್ಯಪಡೆ ರಚಿಸಿ ಕೂಡಲೇ ದುರಸ್ತಿ ಮಾಡಲು ನಿರ್ಧರಿಸಲಾಗಿದೆ. ರಸ್ತೆ ಗುಂಡಿ ನಿರ್ವಹಣೆಗೆ ಒಂದು ಖಾಯಂ ನಿರ್ವಹಣಾ ವ್ಯವಸ್ಥೆ ರೂಪಿಸಲು ಸೂಚಿಸಲಾಗಿದೆ. ವಿಶೇಷ ಸೆಲ್ ಮಾಡಲು ಬಿಬಿಎಂಪಿಗೆ, ಬಿಡಿಎಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ರಾಜಕಾಲುವೆ ಹೂಳು ತೆಗೆಯಲು ಖಡಕ್ ಸೂಚನೆ:ಬೆಂಗಳೂರಲ್ಲಿ 860 ಕಿ.ಮೀ. ರಾಜಕಾಲುವೆ ಇದೆ. ಈ ಹಿಂದೆ ಸಿಎಂ ಆಗಿದ್ದಾಗ 491 ಕಿ.ಮೀ. ರಾಜಕಾಲುವೆ ತೆರವು ಮಾಡಿದ್ದೇನು. ಹಿಂದಿನ ಬಿಜೆಪಿ ಸರ್ಕಾರ 195. ಕಿ.ಮೀ. ತೆರವು ಮಾಡಲು ಕ್ರಮ ಕೈಗೊಂಡಿದ್ದರು. ಜನವರಿಯಲ್ಲಿ 2023 ಟೆಂಡರ್ ಕೊಟ್ಟು ವಿಳಂಬವಾಗಿ ಕೆಲಸ ಆರಂಭಿಸಿದ್ದರು. ಇದರಿಂದ ಸಮಸ್ಯೆ ಆಗಿದೆ. ಈ ಕಾಮಗಾರಿ ಪೂರ್ಣಗೊಳಿಸಲು 2023 - 25 ವರೆಗೆ ಕಾಲಾವಧಿ ನೀಡಲಾಗಿತ್ತು. ಇದಕ್ಕಾಗಿ 1,800 ಕೋಟಿ ಇದಕ್ಕಾಗಿ ಖರ್ಚು ಮಾಡಲಾಗುತ್ತಿದೆ. ಇನ್ನು 174 ಕಿ.ಮೀ. ರಾಜಕಾಲುವೆ ಕಾಮಗಾರಿ ಬಾಕಿ ಉಳಿದಿವೆ. 2,000 ಕೋಟಿ ರೂ. ವಿಶ್ವ ಬ್ಯಾಂಕ್ ಆರ್ಥಿಕ ನೆರವಿನಿಂದ ಈ ಕಾಮಗಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
12.15 ಕಿ.ಮೀ ರಾಜಕಾಲುವೆ ಸಂಬಂಧಿಸಿದಂತೆ ಕೋರ್ಟ್ನಲ್ಲಿ ಸ್ಟೇ ಇದೆ. 12 ಕೇಸ್ ಸಿವಿಲ್ ಕೋರ್ಟ್ನಲ್ಲಿದೆ. ಅವುಗಳನ್ನು ತೆರವು ಮಾಡಲು ಸೂಚಿಸಲಾಗಿದೆ. ಅದಕ್ಕಾಗಿ ವಿಶೇಷ ವಕೀಲರನ್ನು ನೇಮಿಸಿ ಕೇಸ್ ಇತ್ಯರ್ಥಕ್ಕೆ ಸೂಚನೆ ನೀಡಲಾಗಿದೆ. ಯಾರೇ ಇರಲಿ, ರಾಜಕಾರಣಿಗಳಾಗಲಿ, ನಾಯಕರದ್ದಾಗಿರಲಿ ರಾಜಕಾಲುವೆ ಒತ್ತುವರಿ ಇದ್ದರೆ ತೆರವು ಮಾಡಲು ಬಿಬಿಎಂಪಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದರು.
ಪಾಲಿಕೆಯಲ್ಲಿ ಮಳೆ ಬಂದಾಗ ನೀರು ಬರದಂತೆ ಮಾಡಬೇಕು. ಆಗದಿದ್ದರೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲು ಪಾಲಿಕೆ ಮುಖ್ಯ ಆಯುಕ್ತರಿಗೆ ಸೂಚಿಸಲಾಗಿದೆ. ಬೆಂಗಳೂರಲ್ಲಿ 1 ಕೋಟಿಗೂ ಅಧಿಕ ಜನಸಂಖ್ಯೆ ಇದೆ. ಮುಂಚೆ 400 ಕೆರೆಗಳು ಇತ್ತು. ಅನೇಕ ಕೆರೆಗಳು ಒತ್ತುವರಿ ಮಾಡಲಾಗಿದೆ. ಹೂಳು ತುಂಬಿವೆ. ಹೂಳು ತೆಗೆದು, ಒತ್ತುವರಿ ತೆರವಿಗೆ ಸೂಚನೆ ನೀಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು.