ಬೆಂಗಳೂರು:ಕಾಫಿ ಬೋರ್ಡ್ ಆಫ್ ಇಂಡಿಯಾ ಇದೇ ಮೊದಲ ಬಾರಿಗೆ ಕೊಲಂಬಿಯಾ, ಬ್ರೆಜಿಲ್ ಮಾದರಿಯಲ್ಲಿ ಕಾಫಿ ಬೆಳೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಪಾಲುದಾರರನ್ನು ಒಗ್ಗೂಡಿಸುವ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಕಾಫಿ ಬೆಳೆಗಾರರರು, ಸಂಸ್ಕರಣೆದಾರರು, ಸಂಗ್ರಹಕಾರರು, ಮಾರಾಟಗಾರರು, ರೋಸ್ಟರ್ಸ್, ರಾಫ್ತುದಾರರು, ಕೆಫೆ ಚೈನ್ಗಳ ಮಾಲೀಕರನ್ನು ಒಟ್ಟುಗೂಡಿಸಿ ಹೊರ ದೇಶಗಳ ಮಾದರಿಯಲ್ಲಿ ಸ್ಥಳೀಯ ಬ್ರ್ಯಾಂಡ್ ಬಿಲ್ಡಿಂಗ್ ಮಾಡಲು ದಿಟ್ಟ ಹೆಜ್ಜೆ ಇಟ್ಟಿದೆ.
ಇದರ ಮೊದಲ ಭಾಗವಾಗಿ ದೇಶದ ಎಲ್ಲ ಪಾಲುದಾರರಿಗೆ ತಮ್ಮ ಸಲಹೆಗಳನ್ನು ನೀಡಲು ಆಹ್ವಾನ ನೀಡಿದೆ. ಬ್ರೆಜಿಲ್ನ ಕಾಫಿ ವಿಶ್ವದಲ್ಲಿ ತುಂಬಾ ಜನಪ್ರಿಯತೆ ಗಳಿಸಿರುವುದಕ್ಕೆ ಕಾರಣ ಸ್ಥಳೀಯವಾಗಿ ಸಿಕ್ಕ ಪ್ರೋತ್ಸಾಹದಿಂದಾಗಿದೆ. ಅಲ್ಲಿನ ಜನರಿಗೆ ಕಾಫಿಯ ಮಹತ್ವ ವಿವರಿಸಿ ಅಲ್ಲಿ ಸೇವನೆಯನ್ನು ಮೊದಲು ಹೆಚ್ಚಿಸಲಾಯಿತು. ಭಾರತದಲ್ಲೂ ಅದೇ ಮಾದರಿಯ ಪ್ರಚಾರ ಮಾಡುವುದು ಈ ಯೋಜನೆಯ ಪ್ರಮುಖ ಅಂಶವಾಗಿದೆ.
ಭಾರತ ಕಾಫಿ ಬೆಳೆಯುವುದರಲ್ಲಿ 5ನೇ ಸ್ಥಾನವನ್ನು ಪಡೆದಿದೆ ಎನ್ನುವುದೇ ಸಾಮಾನ್ಯ ಜನರಿಗೆ ಗೊತ್ತಿಲ್ಲದ ವಿಚಾರವಾಗಿದೆ. ಅದರ ಗುಣಮಟ್ಟ ಕೂಡ ಕೊಲಂಬಿಯಾ ಅಥವಾ ಬ್ರೆಜಿಲ್ ನಷ್ಟೇ ಉತ್ಕೃಷ್ಟವಾಗಿದೆ ಎನ್ನುವುದು ಕೂಡ ತಿಳಿದಿಲ್ಲ. ಆ ದೇಶಗಳಲ್ಲಿ ಕಾಫಿಯ ಮೌಲ್ಯವನ್ನು ಸ್ಥಳೀಯವಾಗಿ ಉತ್ತಮ ರೀತಿಯಲ್ಲಿ ತಿಳಿಸಿಕೊಡಲಾಗಿದೆ. ಆದ್ದರಿಂದ ವಿಶ್ವ ಮನ್ನಣೆ ಗಳಿಸಲು ಸಾಧ್ಯವಾಗಿದೆ ಎಂದು ಕಾಫಿ ಬೋರ್ಡ್ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಜಿ ಜಗದೀಶ್ ಈಟಿವಿ ಭಾರತ್ಗೆ ತಿಳಿಸಿದರು.