ಕವಿವಿ ಕುಲಪತಿ ಕೆ.ಬಿ. ಗುಡಸಿ ಹಾಗೂ ಕಾನೂನು ಸುವ್ಯವಸ್ಥೆ ಡಿಸಿಪಿ ಕುಶಾಲ್ ಚೌಕ್ಸೆ ಪ್ರತಿಕ್ರಿಯೆ (ETV Bharat) ಧಾರವಾಡ:ಕರ್ನಾಟಕ ವಿಶ್ವವಿದ್ಯಾಲಯದ(ಕೆವಿವಿ) ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಮತ್ತು ಸರಗಳ್ಳತನ ಯತ್ನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಪರಿಚಿತ ವ್ಯಕ್ತಿಗಳು ಕೃತ್ಯ ಎಸಗುತ್ತಿದ್ದಾರೆ. ಈ ರೀತಿಯ ಘಟನೆಗಳು ನಡೆದು ಒಂದು ವಾರ ಕಳೆದರೂ ವಿಶ್ವವಿದ್ಯಾಲಯದ ಆಡಳಿತ ವರ್ಗ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕವಿವಿ ಕುಲಪತಿ ಪ್ರತಿಕ್ರಿಯೆ:ಈ ಕುರಿತು ಕವಿವಿ ಕುಲಪತಿ ಪ್ರತಿಕ್ರಿಯಿಸಿದ್ದು, "ಮೇ 14ರಂದು ವಿವಿಯ ಲೈಬ್ರರಿ ಬಳಿ ಹೋಗುವಾಗ ಅಪರಿಚಿತ ವ್ಯಕ್ತಿಯೋರ್ವ ಮೊಬೈಲ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ತಾ.14 ಹಾಗು 15ರಂದು ನಾನು ಕಾನ್ಫರೆನ್ಸ್ನಲ್ಲಿದ್ದೆ. ಸ್ಥಾನಿಕವಾಗಿ ತನಿಖೆ ಮಾಡುವ ಉದ್ದೇಶದಿಂದ ದೂರು ಕೊಟ್ಟಿರಲಿಲ್ಲ. ಆದರೆ, ನಂತರ ದೂರು ಕೊಡಲಾಗಿದೆ. ಕೆಲವು ಕಡೆಯಿಂದ ಕವಿವಿ ಆವರಣಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಅದಕ್ಕಾಗಿ ಎಲ್ಲೆಡೆ ಗೋಡೆ ಕಟ್ಟಲಾಗುತ್ತಿದೆ" ಎಂದು ತಿಳಿಸಿದರು.
''ಅಲ್ಲದೇ, ಎಲ್ಲ ಕಡೆಗಳಲ್ಲಿ ಸಿಸಿಟಿವಿ ಹಾಕುವ ಉದ್ದೇಶ ಇದೆ. ಸದ್ಯ ಕವಿವಿಯಲ್ಲಿ ರಜೆ ಇರುವ ದಿನ ಹೊರಗಿನವರಿಗೆ ಪ್ರವೇಶ ಬಂದ್ ಮಾಡಲಾಗುತ್ತಿದೆ. ಭದ್ರತಾ ಸಿಬ್ಬಂದಿಯನ್ನೂ ಹೆಚ್ಚಿಸಲಾಗುತ್ತಿದೆ. 888 ಎಕರೆ ಪ್ರದೇಶದಲ್ಲಿ ಕ್ಯಾಂಪಸ್ ಇರುವುದರಿಂದ ಅಪರಿಚಿತರು ಒಳಗೆ ಬಂದಿದ್ದಾರೆ. ಮೊದಲು ಕವಿವಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಇದ್ದರು. ಈಗ ಇಲ್ಲ. ಈ ಬಗ್ಗೆ ಅನೇಕ ಸಲ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ'' ಎಂದರು.
ಡಿಸಿಪಿ ಕುಶಾಲ್ ಚೌಕ್ಸೆ ಹೇಳಿಕೆ:ಕಾನೂನು ಸುವ್ಯವಸ್ಥೆ ಡಿಸಿಪಿ ಕುಶಾಲ್ ಚೌಕ್ಸೆ ಪ್ರತಿಕ್ರಿಯಿಸಿ, ''ಈಗಾಗಲೇ ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ತಡವಾಗಿ ಬಂದಿದೆ. ಆದ್ರೂ, ಪ್ರಕರಣ ತನಿಖೆ ನಡೆಸಿ ಆರೋಪಿಗಳ ಹುಡುಕಾಟ ನಡೆಯುತ್ತಿದೆ. ಓರ್ವ ವ್ಯಕ್ತಿ ಬೈಕ್‌ನಲ್ಲಿ ಬಂದು ವಿದ್ಯಾರ್ಥಿನಿಯರಿಗೆ ತೊಂದರೆ ಕೊಟ್ಟಿದ್ದಾನೆ ಎಂಬ ಮಾಹಿತಿ ಇದೆ. ಸಿಸಿಟಿವಿ ಫುಟೇಜ್ ಕೂಡಾ ತೆಗೆದುಕೊಳ್ಳಲಾಗುತಿದೆ. ಕರ್ನಾಟಕ ವಿವಿಗೆ ಭದ್ರತೆ ಹೆಚ್ಚಿಸಲು ಸೂಚಿಸಲಾಗಿದೆ'' ಎಂದರು.
ಇದನ್ನೂ ಓದಿ:ಶಿವಮೊಗ್ಗ: 3 ವರ್ಷದಲ್ಲಿ 468 ಪೋಕ್ಸೊ ಪ್ರಕರಣ ದಾಖಲು - POCSO Cases In Shivamogga