ಬೆಂಗಳೂರು: ಸಿಸಿಬಿ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ನೈಜೀರಿಯಾ ಪುಂಡರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಮಾರು ಎಂಟು ಮಂದಿ ನೈಜೀರಿಯಾ ಪುಂಡರನ್ನು ರಾಜನಕುಂಟೆ ಬಳಿ ವಶಕ್ಕೆ ಪಡೆದಿದೆ. ಸಿಸಿಬಿ ಅಧಿಕಾರಿ ಮತ್ತು ಸಿಬ್ಬಂದಿ ಮೇಲಿನ ಹಲ್ಲೆಯನ್ನು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಗಂಭೀರವಾಗಿ ಪರಿಗಣಿಸಿದ್ದರು. ಹಲ್ಲೆ ನಡೆಸಿದ್ದ ಪುಂಡರ ಹೆಡೆಮುರಿ ಕಟ್ಟಲು ಸಿಸಿಬಿ ಪೊಲೀಸರ ಜತೆಗೆ ಡಿಸ್ವಾಟ್ ಪಡೆಯನ್ನು ನಿಯೋಜಿಸಲಾಗಿತ್ತು. ಶುಕ್ರವಾರ ಸಂಜೆ ಕಾರ್ಯಾಚರಣೆಗಿಳಿದ ಡಿಸ್ವಾಟ್ ಮತ್ತು ಸಿಸಿಬಿ ಪೊಲೀಸರು ಎಂಟು ಮಂದಿಯ ಹೆಡೆಮುರಿ ಕಟ್ಟಿದ್ದಾರೆ.
ಪ್ರಕರಣದ ಹಿನ್ನೆಲೆ:ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಆಫ್ರಿಕಾದ ಪ್ರಜೆಗಳು ಹಲ್ಲೆ ಮಾಡಿದ ಘಟನೆ ನಿನ್ನೆ ದಿನ ತಡರಾತ್ರಿ ಬೆಂಗಳೂರು ಗ್ರಾಮಾಂತರದ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾವಳ್ಳಿಪುರದಲ್ಲಿ ನಡೆದಿತ್ತು. ಸಿಸಿಬಿ ಇನ್ಸ್‌ಪೆಕ್ಟರ್ ಸುಬ್ರಹ್ಮಣ್ಯಸ್ವಾಮಿ ಸೇರಿದಂತೆ ಐದಕ್ಕೂ ಹೆಚ್ಚು ಸಿಬ್ಬಂದಿ ಮೇಲೆ ಹಲ್ಲೆ ನಡೆದಿತ್ತು.