ಬಾಲ್ಯವಿವಾಹ ಮೆಟ್ಟಿನಿಂತ ಬಾಲಕಿ ಬೆಳಗಾವಿ: ಪ್ರತಿಭೆ ಮತ್ತು ಸಾಧನೆಗೆ ಯಾವುದೂ ಅಡ್ಡಿಯಲ್ಲ ಎಂಬುದನ್ನು ಬೆಳಗಾವಿಯ ಈ ಹುಡುಗಿ ಸಾಧಿಸಿ ತೋರಿಸಿದ್ದಾರೆ. ಬಾಲ್ಯ ವಿವಾಹಕ್ಕೊಳಗಾಗಿ ಸವದತ್ತಿ ಬಾಲಕಿಯರ ಬಾಲಮಂದಿರ ಸೇರಿದ್ದ ಇವರು, ಪಿಯುಸಿ ದ್ವಿತೀಯ ವರ್ಷದ ಕಲಾ ವಿಭಾಗದಲ್ಲಿ ಶೇ.94.16ರಷ್ಟು ಅಂಕ ಗಳಿಸಿದ್ದಾರೆ. ರಾಯಬಾಗ ತಾಲೂಕಿನ ಗ್ರಾಮವೊಂದರ ನಿವಾಸಿಯಾಗಿರುವ ಇವರು, ತಮ್ಮ ಪರೀಕ್ಷಾ ಫಲಿತಾಂಶದಿಂದ ಇದೀಗ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.98.40ರಷ್ಟು ಅಂಕ ಗಳಿಸಿರುವ ವಿದ್ಯಾರ್ಥಿನಿ ರಾಯಬಾಗದ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದರು. ಆದರೆ, ಪಿಯು ಪ್ರಥಮ ವರ್ಷದಲ್ಲಿದ್ದಾಗಲೇ ಹೆತ್ತವರು ಬಾಲ್ಯವಿವಾಹ ಮಾಡಿಸಿದ್ದರು. ಕಾಲೇಜು ಬಿಡಿಸಿ ಗಂಡನ ಮನೆಗೆ ಕಳುಹಿಸಲು ನಿರ್ಧರಿಸಿದ್ದರು. ಆದರೆ, ಇದಕ್ಕೊಪ್ಪದ ಬಾಲಕಿ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಸಂಪರ್ಕಿಸಿದ್ದಳು.
ಬಾಲಕಿಯ ಕರೆಗೆ ಕೂಡಲೇ ಸ್ಪಂದಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಮನೆಗೆ ದೌಡಾಯಿಸಿ ಆಕೆಯನ್ನು ಕುಟುಂಬಸ್ಥರಿಂದ ರಕ್ಷಿಸಿದ್ದರು. ರಾಯಬಾಗದ ಮಹಿಳಾ ಸಾಂತ್ವನ ಕೇಂದ್ರದಲ್ಲಿರಿಸಿ, ನಂತರ ಆಕೆಯನ್ನು ಮಕ್ಕಳ ಕಲ್ಯಾಣ ಸಮಿತಿಯೆದುರು ಹಾಜರುಪಡಿಸಿದ್ದರು. ಸಮಿತಿ ಆದೇಶದಂತೆ ಸವದತ್ತಿಯ ಬಾಲಕಿಯರ ಸರ್ಕಾರಿ ಬಾಲಮಂದಿರಕ್ಕೆ ಸೇರಿಸಿದ್ದರು. ರಾಯಬಾಗದ ಕಾಲೇಜಿನಲ್ಲೇ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿದ್ದರು.
ಬಾಲ ಮಂದಿರದಲ್ಲಿದ್ದುಕೊಂಡೇ ಮೇರು ಸಾಧನೆ:ಚಿಕ್ಕ ವಯಸ್ಸಿನಲ್ಲೇ ಇಷ್ಟೆಲ್ಲ ತಾಪತ್ರಯ ಎದುರಾದರೂವಿದ್ಯಾರ್ಥಿನಿ ಕುಗ್ಗಲಿಲ್ಲ. ಬಾಲಮಂದಿರದಲ್ಲಿ ಇದ್ದುಕೊಂಡೇ ಕಠಿಣ ಅಭ್ಯಾಸ ಮಾಡಿ, ಅತ್ಯುನ್ನತ ಶ್ರೇಣಿಯೊಂದಿಗೆ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿನಿ ಪಡೆದ ಅಂಕಗಳು: ಕನ್ನಡ ವಿಷಯ 98, ಇಂಗ್ಲಿಷ್ 85, ಇತಿಹಾಸ 99, ಅರ್ಥಶಾಸ್ತ್ರ 93, ರಾಜ್ಯಶಾಸ್ತ್ರ 97, ಸಮಾಜಶಾಸ್ತ್ರ 93 ಅಂಕಗಳು.
IAS ಅಧಿಕಾರಿಯಾಗುವ ಗುರಿ: ತನ್ನ ಸಾಧನೆ ಬಗ್ಗೆ ವಿದ್ಯಾರ್ಥಿನಿ ಪ್ರತಿಕ್ರಿಯಿಸಿ, ''ಬಾಲ್ಯದಲ್ಲಿ ನಾನು ದೊಡ್ಡ ಕನಸು ಕಂಡಿದ್ದೆ. ಆದರೆ, ಕುಟುಂಬದವರು ನನಗೆ ಬಾಲ್ಯವಿವಾಹ ಮಾಡಿಸಿದ್ದರು. ನಾನು ಬಾಲಮಂದಿರದ ನೆರವಿನಿಂದ ಒಳ್ಳೆಯ ಅಂಕ ಗಳಿಸಲು ಸಾಧ್ಯವಾಗಿದೆ. ಮುಂದೆ ಕಲಾ ಪದವಿ ಪ್ರವೇಶ ಪಡೆದು, ಐಎಎಸ್ ಅಧಿಕಾರಿಯಾಗುವ ಗುರಿ ಇಟ್ಟುಕೊಂಡಿದ್ದೇನೆ. ದಯವಿಟ್ಟು ಯಾವ ಪಾಲಕರೂ ತಮ್ಮ ಮಕ್ಕಳಿಗೆ ಬಾಲ್ಯ ವಿವಾಹ ಮಾಡಿಸಬೇಡಿ. ಅವರ ಇಚ್ಛೆಯಂತೆ ಕಲಿಯುವ ಸ್ವಾತಂತ್ರ್ಯ ಕೊಡಿ'' ಎಂದು ಮನವಿ ಮಾಡಿದರು.
ವಿದ್ಯಾರ್ಥಿನಿಯ ಅಜ್ಜಿ ಮಾತನಾಡಿ, ''ಮೊಮ್ಮಗಳ ಸಾಧನೆಯಿಂದ ಬಹಳಷ್ಟು ಖುಷಿ ಆಗುತ್ತಿದೆ. ಮುಂದೆ ಎಷ್ಟು ಕಲಿಯುತ್ತಾಳೋ ಕಲಿಯಲಿ. ಅವಳ ಭವಿಷ್ಯ ಹಾಳು ಮಾಡುವುದಿಲ್ಲ. ಆಕೆಗೆ ಬಾಲ್ಯ ವಿವಾಹ ಮಾಡಿದ ತಪ್ಪಿನ ಅರಿವು ನಮಗಾಗಿದೆ'' ಎಂದರು.
ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ ಮಾತನಾಡಿ, ''ನಮ್ಮ ಬಾಲಮಂದಿರದ ವಿದ್ಯಾರ್ಥಿನಿಯ ಸಾಧನೆ ಸಂತಸ ತಂದಿದೆ. ಮಕ್ಕಳಲ್ಲಿ ಸಾಧನೆ ಮಾಡಬೇಕೆಂಬ ಹುಮ್ಮಸ್ಸು ಇರುತ್ತದೆ. ಆದರೆ, ಕೆಲವು ತಂದೆ ತಾಯಿ ಬಾಲ್ಯ ವಿವಾಹ ಮಾಡಿಸಿ ಅವರ ಭವಿಷ್ಯವನ್ನೇ ಹಾಳು ಮಾಡುತ್ತಿದ್ದಾರೆ. ಹಾಗಾಗಿ, ಯಾರೂ ಇಂತಹ ಯತ್ನಕ್ಕೆ ಕೈ ಹಾಕಬೇಡಿ. ಮಕ್ಕಳು ಸಾಧನೆ ಮಾಡಲು ಪ್ರೋತ್ಸಾಹಿಸಬೇಕು. ಮಕ್ಕಳಲ್ಲಿರುವ ಪ್ರತಿಭೆ ಹೊರಗೆ ತರಲು ಬೆನ್ನೆಲುಬಾಗಿ ನಿಲ್ಲಬೇಕು'' ಎಂದು ಸಲಹೆ ನೀಡಿದರು.
ಇದನ್ನೂ ಓದಿ:ಎಸ್ಎಸ್ಎಲ್ಸಿಯಲ್ಲಿ 2ನೇ ರ‍್ಯಾಂಕ್ ಪಡೆದ ಮಂಗಳೂರಿನ ಬೆಸ್ಟ್ ಫ್ರೆಂಡ್ಸ್ ಪಿಯುಸಿಯಲ್ಲೂ ಟಾಪರ್ಸ್ - PU Toppers