ಚಿನ್ನಾಭರಣ ದೋಚುತ್ತಿದ್ದ ಕಕ್ರಾಲ್ ಗ್ಯಾಂಗ್ನ 9 ಮಂದಿ ಸೆರೆ ತುಮಕೂರು:ಜ್ಯುವೆಲ್ಲರಿ ಶಾಪ್ಗಳನ್ನು ಟಾರ್ಗೆಟ್ ಮಾಡಿ, ಗ್ಯಾಸ್ ಕಟ್ಟರ್ ಬಳಸಿ ಬಾಗಿಲು ಮುರಿದು ಸದ್ದಿಲ್ಲದೇ ಕಳ್ಳತನ ಮಾಡುತ್ತಿದ್ದ ಉತ್ತರ ಪ್ರದೇಶದ ಮೂಲದ ಕಕ್ರಾಲ್ ಗ್ಯಾಂಗ್ನ 9 ಮಂದಿ ಆರೋಪಿಗಳನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ. ವಾಹಿದ್ ಖಾನ್, ಖುರ್ಷಿದ್ ಖಾನ್, ಅಮೀರ್ ಖಾನ್, ಯಶ್ವಂತ್ ಸಿಂಗ್, ಅಬ್ದುಲ್ ಮಲ್ಲಿಕ್, ಕರೀಂಖಾನ್, ಬಾಬು ಖಾನ್ ಸೇರಿ 9 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಿಂದ 7 ಕೆಜಿ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ ಮಾತನಾಡಿ, "ಎರಡು ತಿಂಗಳ ಹಿಂದೆ ಸಿ ಎಸ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಜ್ಯುವೆಲ್ಲರಿ ಶಾಪ್ನಲ್ಲಿ 10 ಕೆಜಿ ಬೆಳ್ಳಿ ಕಳ್ಳತನವಾಗಿತ್ತು. ಮತ್ತೊಂದು ಜ್ಯುವೆಲ್ಲರಿ ಶಾಪ್ನಲ್ಲಿ ಕಳ್ಳತನ ಪ್ರಯತ್ನ ನಡೆದಿತ್ತು. ಈ ವೇಳೆ, ಪೊಲೀಸರು ಮತ್ತು ಸ್ಥಳೀಯರು ಸೇರಿ ಇಬ್ಬರು ಖದೀಮರನ್ನು ಸೆರೆ ಹಿಡಿದಿದ್ದರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಮೊದಲನೇ ಪ್ರಕರಣದಲ್ಲೂ ಭಾಗಿಯಾಗಿರುವ ಅಂಶ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಕಕ್ರಾಲ್ ಎಂಬ ಅಪರಾಧ ಹಿನ್ನೆಲೆಯುಳ್ಳ ಗ್ರಾಮದಲ್ಲಿ ಇತರ ಆರೋಪಿಗಳು ಇದ್ದಾರೆ ಎಂಬ ಮಾಹಿತಿ ಆಧಾರದ ಮೇರೆಗೆ ಒಂದು ವಿಶೇಷ ಪೊಲೀಸ್ ತಂಡವನ್ನು ರಚಿಸಿ ಅಲ್ಲಿಗೆ ಕಳುಹಿಸಲು ಯೋಜನೆ ರೂಪಿಸಿದ್ದೆವು" ಎಂದರು.
"ನಾವು ಆರೋಪಿಗಳನ್ನು ಸೆರೆಹಿಡಿಯಲು ಯೋಜನೆ ರೂಪಿಸುತ್ತಿದ್ದಾಗ ಇದೇ ಆರೋಪಿಗಳ ಗ್ಯಾಂಗ್ ಕಾರವಾರಕ್ಕೆ ಬಂದಿತ್ತು. ನಮ್ಮ ತಂಡವನ್ನು ಅಲ್ಲಿಗೆ ಕಳುಹಿಸಿ ಆರೋಪಿಗಳನ್ನು ಬಂಧಿಸಿದ್ದೇವೆ. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಕಳ್ಳತನ ಮಾಡಲು ಬಂದಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಆರೋಪಿಗಳು ಜ್ಯುವೆಲ್ಲರಿ ಶಾಪ್ನಲ್ಲಿ ಕದ್ದಿದ್ದ 10 ಕೆಜಿ ಬೆಳ್ಳಿಯನ್ನು ಕಕ್ರಾಲ್ದಲ್ಲಿ ಮಾರಾಟ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅವರನ್ನು ಕಕ್ರಾಲ್ಗೆ ಕರೆದುಕೊಂಡು ಹೋಗಿ 8 ಕೆಜಿ ಬೆಳ್ಳೆಯನ್ನು ವಶಪಡಿಸಿಕೊಂಡಿದ್ದೇವೆ. ನಂತರ ಆರೋಪಿಗಳನ್ನು ಇಲ್ಲಿಗೆ ಕರೆದುಕೊಂಡು ಬಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖೆ ನಡೆಯುತ್ತಿದೆ ಅದಷ್ಟು ಬೇಗ ಚಾರ್ಜ್ ಶೀಟ್ ಸಲ್ಲಿಸಲಾಗುತ್ತದೆ. ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನುಳಿದವರಿಗಾಗಿ ಶೋಧ ನಡೆಸುತ್ತಿದ್ದೇವೆ" ಎಂದು ತಿಳಿಸಿದರು.
ಜುವೆಲ್ಲರಿ ಶಾಪ್ ಮಾಲೀಕ ಮೋಹನ್ ಲಾಲ್ ಮಾತನಾಡಿ, "ಕಳೆದ ಅಕ್ಟೋಬರ್ ತಿಂಗಳ 12ನೇ ತಾರೀಖಿನಂದು ರಾತ್ರಿ ಖದೀಮರು ಗ್ಯಾಸ್ ಕಟ್ಟರ್ ಮೂಲಕ ಬಾಗಿಲು ಕಟ್ ಮಾಡಿದ್ದರು. ಬಳಿಕ ಸೆನ್ಸಾರ್ ಮೂಲಕ ನಮಗೆ ಅಲರ್ಟ್ ಬಂತು, ನಾವು ಸಿಸಿಟಿವಿ ಪರಿಶೀಲಿಸಿದಾಗ ಕಳ್ಳರು ಬೆಳ್ಳಿಯ ವಸ್ತುಗಳನ್ನು ಕದಿಯುತ್ತಿದ್ದರು. ತಕ್ಷಣ ನಾನು ಕಟ್ಟಡದ ಮಾಲೀಕ, ನಮ್ಮ ಹುಡುಗರು ಮತ್ತು ಅಕ್ಕ ಪಕ್ಕದವರಿಗೆ ಕರೆ ಮಾಡಿ ಮಾಹಿತಿ ನೀಡಿದೆ. ಅವರೆಲ್ಲರೂ ಕಳ್ಳತರನ್ನು ಹಿಡಿಯಲು ಹೋದಾಗ ಎಲ್ಲರೂ ಪರಾರಿಯಾಗುತ್ತಿದ್ದರು. ಕಳ್ಳರು ಸಿಕ್ಕಿಹಾಕಿಕೊಳ್ಳುತ್ತೇವೆ ಎಂಬ ಭಯದಿಂದ ಗುಂಡು ಹಾರಿಸಿದ್ದರು. ನಂತರ ಅವರನ್ನು ಯಾರು ಹಿಂಬಾಲಿಸಿರಲಿಲ್ಲ. ಸದ್ಯ ಪೊಲೀಸರ ಸಹಕಾರದಿಂದ ಸ್ಪಲ್ಪ ಬೆಳ್ಳಿಯ ವಸ್ತುಗಳು ಸಿಕ್ಕಿವೆ" ಎಂದರು.
ಇದನ್ನೂ ಓದಿ:ಸಾಲ ತೀರಿಸಲು ಯೂಟ್ಯೂಬ್ ನೋಡಿ ಕಳ್ಳತನಕ್ಕಿಳಿದ ಮೆಕ್ಯಾನಿಕಲ್ ಇಂಜಿನಿಯರ್ ಬಂಧನ