ಬೆಂಗಳೂರು:''ಸಹಕಾರ ಕ್ಷೇತ್ರಗಳಲ್ಲಿ ಶಿಕ್ಷಣ ಹಾಗೂ ತರಬೇತಿ ಪಡೆದವರಿಗೆ ಸಹಕಾರ ಬ್ಯಾಂಕ್ಗಳಲ್ಲಿ, ಸಹಕಾರ ಕ್ಷೇತ್ರಗಳಲ್ಲಿ ಹುದ್ದೆಗಳನ್ನು ಮೀಸಲಿಡಲು ಪ್ರಯತ್ನಿಸಲಾಗುವುದು'' ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಭರವಸೆ ನೀಡಿದ್ದಾರೆ.
ಸೆಂಟ್ರಲ್ ಕಾಲೇಜು ಆವರಣದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಗುರುವಾರ ನಡೆದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ-2024 ಕಾರ್ಯಕ್ರಮದಲ್ಲಿ 'ಸಹಕಾರ ಪತ್ರಿಕೆ' ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ''ಉತ್ತಮವಾಗಿ ಕೆಲಸ ಮಾಡುವವರಿಗೆ ಸಹಕಾರಿಗಳು ಬೆಂಬಲ ನೀಡಬೇಕು. ಸಂಸ್ಥೆಗೆ ಬಂದ ಮೇಲೆ ರಾಜಕಾರಣದ ಚಿಂತನೆ ಹೊರಗಿಟ್ಟು, ಒಳಗೆ ಬಂದಾಗ ಸಹಕಾರಿಗಳ ಅಭ್ಯುದಯ ಸಾಧ್ಯ. ಸಹಕಾರ ಕ್ಷೇತ್ರಗಳಲ್ಲಿ ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಕೆಲಸ ಮಾಡಬೇಕು'' ಎಂದು ಸಲಹೆ ನೀಡಿದರು.
ಸಚಿವ ಕೆ.ಎನ್. ರಾಜಣ್ಣ (ETV Bharat) ''ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎಂಬ ಧ್ಯೇಯದೊಂದಿಗೆ ಸಪ್ತಾಹ ಆಚರಿಸಲಾಗುತ್ತಿದೆ. ಸಹಕಾರ ಸಚಿವಾಲಯದ ನೂತನ ಪ್ರಯತ್ನಗಳ ಮೂಲಕ ಸಹಕಾರ ಚಳವಳಿಯನ್ನು ಬಲಪಡಿಸುವ ಸಂಕಲ್ಪ ಹೊಂದಿದ್ದೇವೆ. ರಾಜ್ಯದ ಎಲ್ಲ ಸಹಕಾರಿಗಳು ಸಹಕಾರ ಚಳವಳಿಯನ್ನು ಬಲಪಡಿಸಬೇಕು. ಆಂದೋಲನವು ರಾಜ್ಯ ರಾಷ್ಟ್ರಮಟ್ಟದಲ್ಲಿ ಮುಂದಾಳತ್ವ ವಹಿಸಬೇಕು'' ಎಂದು ಕರೆ ನೀಡಿದರು.
''ಸಹಕಾರಿಗಳ ಆಂದೋಲನವು ಅವರ ಬೇಡಿಕೆಗಳ ಅನುಗುಣವಾಗಿ ಸಂಸ್ಥೆಗಳು ಸ್ಥಾಪಿತವಾಗಬೇಕು. ಈ ಆಂದೋಲನದಲ್ಲಿ ಸರ್ಕಾರವು ಹೆಚ್ಚು ಪ್ರಭಾವ ಬೀರುವ ಪ್ರಯತ್ನ ಮಾಡಿಲ್ಲ. ಅದು ಸಹಕಾರಿ ಆಂದೋಲನವಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ಕ್ಷೇತ್ರವು ಉತ್ತಮವಾಗಿ ಕೆಲಸ ಮಾಡಬೇಕಾದರೆ ಕೆಲವು ಅಡಚಣೆಗಳಿದ್ದು, ಅವುಗಳಿಗೆ ತಿದ್ದುಪಡಿ ತರಲಾಗುವುದು'' ಎಂದು ಹೇಳಿದರು.
71ನೇ ಅಖಿಲ ಭಾರತ ಸಹಕಾರ ಸಪ್ತಾಹ-2024 ಕಾರ್ಯಕ್ರಮ (ETV Bharat) ಸಹಕಾರ ತತ್ವ-ಆಚರಣೆ ಬಗ್ಗೆ ಜನಜಾಗೃತಿ:ಶಾಸಕ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಅಧ್ಯಕ್ಷ ಜಿ.ಟಿ.ದೇವೇಗೌಡ ಮಾತನಾಡಿ, ''ಸಹಕಾರ ತತ್ವ- ಆಚರಣೆ ಬಗ್ಗೆ ಜನಜಾಗೃತಿ ಮೂಡಿಸುವುದೇ ಸಹಕಾರ ಸಪ್ತಾಹದ ಉದ್ದೇಶವಾಗಿದೆ. ಸಪ್ತಾಹದ ಸಂದರ್ಭದಲ್ಲಿ ನಡೆಯುವ ಕಾರ್ಯಕ್ರಮಗಳು ಜನಜಾಗೃತಿಗೆ ಸಂಬಂಧಿಸಿದಂತೆ ಇರಬೇಕು'' ಎಂದು ತಿಳಿಸಿದರು.
''ಸಹಕಾರ ಸಪ್ತಾಹವನ್ನು ನವೆಂಬರ್ 14ರಿಂದ 20ರ ವರೆಗೆ 7 ದಿನಗಳ ಕಾಲ ಆಚರಿಸಲಾಗುತ್ತದೆ. ನವೆಂಬರ್ 14ರ ಇಂದು ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ಅವರ ಹುಟ್ಟುಹಬ್ಬವಾಗಿದೆ. ನೆಹರು ಅವರು ಪಂಚವಾರ್ಷಿಕ ಯೋಜನೆಯಲ್ಲಿ ಬಹಳಷ್ಟು ಯೋಜನೆಯನ್ನು ಸಹಕಾರ ಕ್ಷೇತ್ರಕ್ಕೆ ನೀಡಿದ್ದರು. ಭಾರತ ದೇಶದ ಆರ್ಥಿಕ ಹೆಬ್ಬಾಗಿಲು ಸಹಕಾರ ಕ್ಷೇತ್ರ ಎಂದು ಬಹಳವಾಗಿ ನಂಬಿದ್ದರು. ಆದ್ದರಿಂದ ಅವರು ಹುಟ್ಟು ಹಬ್ಬದಂದು ಸಹಕಾರ ಸಪ್ತಾಹವನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತದೆ'' ಎಂದರು.
71ನೇ ಅಖಿಲ ಭಾರತ ಸಹಕಾರ ಸಪ್ತಾಹ-2024 ಕಾರ್ಯಕ್ರಮ (ETV Bharat) ''ರಾಜ್ಯದಲ್ಲಿ 47 ಸಾವಿರ ಸಹಕಾರ ಕ್ಷೇತ್ರಗಳಿದ್ದು, 2 ಲಕ್ಷ ಕೋಟಿ ಠೇವಣಿ ಇಡಲಾಗಿದ್ದು, 2 ಲಕ್ಷ ಕೋಟಿ ಸಾಲ ನೀಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಸಹಕಾರ ಕ್ಷೇತ್ರಗಳಲ್ಲಿ ಶಿಕ್ಷಣ ಪಡೆದವರಿಗೆ ಸಹಕಾರ ಬ್ಯಾಂಕುಗಳಲ್ಲಿ, ಸಹಕಾರ ಕ್ಷೇತ್ರಗಳಲ್ಲಿ ಹುದ್ದೆಗಳನ್ನು ಮೀಸಲಿಡಬೇಕು ಈ ಕ್ಷೇತ್ರಗಳಲ್ಲಿ ದುರುಪಯೋಗಪಡಿಸಿಕೊಂಡವರ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕು. ಸಹಕಾರ ಸಚಿವರ ನೇತೃತ್ವದಲ್ಲಿ ಸಹಕಾರ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಬೇಕು'' ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಳದ ಅಧ್ಯಕ್ಷ ಎಸ್.ಟಿ.ಸೋಮಶೇಖರ್, ರಾಜ್ಯ ಮಟ್ಟದ, ಜಿಲ್ಲಾ ಮಟ್ಟದ ಎಲ್ಲಾ ಸಹಕಾರಿ ಸಂಸ್ಥೆಗಳ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ನಿರ್ದೇಶಕರುಗಳು, ಸಹಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ:ಕೋವಿಡ್ ಹಗರಣ: ತನಿಖೆ, ಕ್ರಮ ವಹಿಸಲು ಎಸ್ಐಟಿ ರಚನೆಗೆ ಸಂಪುಟದ ತೀರ್ಮಾನ