ಬೆಂಗಳೂರು:ರಾಜ್ಯ ಪಠ್ಯಕ್ರಮ ಅಳವಡಿಸಿಕೊಂಡಿರುವ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಐದು, ಎಂಟು ಮತ್ತು ಒಂಭತ್ತನೆಯ ತರಗತಿಗಳ ಮಕ್ಕಳಿಗೆ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಪಡಿಸಿದ್ದ ಹೈಕೋರ್ಟಿನ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿದ್ದ ದ್ವಿಸದಸ್ಯ ಪೀಠದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟ (ರುಪ್ಸಾ), ಅನುದಾನ ರಹಿತ ಶಾಲೆಗಳ ಒಕ್ಕೂಟ (ಅವರ್ ಸ್ಕೂಲ್) ಮತ್ತು ಆರ್ಟಿಇ ಫೊಷಕರು ಹಾಗೂ ವಿದ್ಯಾರ್ಥಿಗಳ ಸಂಘ ಸುಪ್ರೀಂಕೋರ್ಟ್ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬೆಲ ಎಂ.ತ್ರಿವೇಧಿ ಮತ್ತು ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಅವರಿದ್ದ ನ್ಯಾಯಪೀಠ ಬೋರ್ಡ್ ಪರೀಕ್ಷೆಗೆ ತಡೆ ನೀಡಿ ಆದೇಶಿಸಿದೆ.
ಕಡ್ಡಾಯ ಶಿಕ್ಷಣ ಹಕ್ಕು (ಆರ್ಟಿಇ) ಕಾಯಿದೆ ಸೆಕ್ಷನ್ 30ರ ಪ್ರಕಾರ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸುವವರೆಗೂ ಯಾವುದೇ ಮಗು ಬೋರ್ಡ್ ಮಟ್ಟದ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂಬ ನಿಯಮವಿಲ್ಲ. ಆದರೆ, 5,8 ಮತ್ತು 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ಆರ್ಟಿಇ ಕಾಯಿದೆಯ ಸೆಕ್ಷನ್ 30ರ ಉಲ್ಲಘನೆಯಾಗಿದೆ ಎಂದು ಪೀಠ ತಿಳಿಸಿದೆ.
ರಾಜ್ಯ ಸರ್ಕಾರದ ವಾದ ಏನು?:ವಿಚಾರಣೆ ವೇಳೆ ಕರ್ನಾಟಕ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ ಕಾಮತ್, ಹೈಕೋರ್ಟ್ ವಿಭಾಗೀಯ ಪೀಠ ಸರಿಯಾದ ಆದೇಶ ನೀಡಿದೆ ಎಂದು ವಾದಿಸಿದರು. ಇದು ಪರೀಕ್ಷೆ ಅಲ್ಲ, ಸಂಕಲನಾತ್ಮಕ ಮೌಲ್ಯಮಾಪನವಾಗಿದೆ. ವಿದ್ಯಾರ್ಥಿಗಳನ್ನು ಮುಂದಿನ ಭವಿಷ್ಯವನ್ನು ರೂಪಿಸುವುದು ರಾಜ್ಯದ ನೀತಿಯಾಗಿದೆ ಎಂದು ಪ್ರತಿಪಾದಿಸಿದರು.
9 ಮತ್ತು 11ನೇ ತರಗತಿಗಳು ಶಿಕ್ಷಣ ಹಕ್ಕು ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ. ಇನ್ನು ಈಗಾಗಲೇ 11ನೇ ತರಗತಿ ಪರೀಕ್ಷೆಗಳು ಮುಗಿದಿವೆ ಎಂಬ ವಿಚಾರವನ್ನು ಸಹ ಕಾಮತ್ ಅವರು ಪೀಠದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಮಿಥಾಲ್, ಕಾಮತ್ ಅವರು ಆರ್‌ಟಿಇಯ ಸೆಕ್ಷನ್ 30 ಉಲ್ಲೇಖಿಸಿದ್ದಾರೆ, ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೆ ಯಾವುದೇ ಮಗು ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಗತ್ಯವಿಲ್ಲ. ಉತ್ತೀರ್ಣರಾಗುವ ಅಗತ್ಯವಿಲ್ಲದಿದ್ದರೆ, ನೀವೇಕೆ ಪರೀಕ್ಷೆ ನಡೆಸುತ್ತಿದ್ದೀರಿ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದ ನಿರ್ಧಾರದ ಕುರಿತಂತೆ ಪೀಠಕ್ಕೆ ಕಾಮತ್ ವಿವರಣೆ ನೀಡಿದರು. ತರಗತಿಯಲ್ಲಿ ನೀಡಲಾಗುತ್ತಿರುವ ವಿಷಯವು ಗುಣಮಟ್ಟಕ್ಕೆ ಅನುಗುಣವಾಗಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಹೀಗಾಗಿ ನಮ್ಮ ವ್ಯಾಪ್ತಿಯಲ್ಲಿ ಬರುವ ಶಾಲೆಗಳು ತಮ್ಮ ಕೆಲಸವನ್ನು ಸರಿಯಾಗಿ ಮಾಡುತ್ತಿವೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ನಿರ್ಣಯಿಸಲು ಉತ್ತಮ ಮಾರ್ಗವೆಂದರೆ ಏಕರೂಪದ ಮೌಲ್ಯಮಾಪನ ಮಾಡುವುದಾಗಿದೆ ಎಂಬ ವಾದ ಮಂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು “ನೀವು ದೇಶದ ಸಂಪೂರ್ಣ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದ್ದೀರಿ ಮತ್ತು ಈಗ ನೀವು ಅದನ್ನು ಮತ್ತಷ್ಟು ಸಂಕೀರ್ಣಗೊಳಿಸಲು ಬಯಸುತ್ತೀರಾ. ದಯವಿಟ್ಟು ಹಾಗೆ ಮಾಡಬೇಡಿ. ಮಕ್ಕಳು ಈ ಹಂತದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಗತ್ಯವಿಲ್ಲ. ಹೀಗಾಗಿ ಪರೀಕ್ಷೆಯನ್ನು ನಡೆಸಬೇಡಿ ಎಂದರು. ಆದರೆ, ಕಾಮತ್ ಪರೀಕ್ಷೆಯ ಅಗತ್ಯವಿದೆ ಎಂದು ವಾದಿಸಿದರು. ಮತ್ತು ವಿಭಾಗೀಯ ಪೀಠದ ಆದೇಶದ ವಿರುದ್ಧ ಮೇಲ್ಮನವಿಗಳಿಗೆ ಅವಕಾಶ ನೀಡದಂತೆ ನ್ಯಾಯಾಲಯವನ್ನು ಒತ್ತಾಯಿಸಿದರು.
ಅವರ ಈ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ತ್ರಿವೇದಿ ಅವರು, “ಬೋರ್ಡ್ ಪರೀಕ್ಷೆಗಳು ತಮ್ಮದೇ ಆದ ಭಯವನ್ನು ಹೊಂದಿವೆ, ಹೀಗಾಗಿ ಸಾರ್ವಜನಿಕರು ಸಹ ಆತಂಕದಲ್ಲಿದ್ದಾರೆ ಎಂದರು. ಈ ವೇಳೆ ತಮ್ಮ ವಾದ ಮುಂದುವರಿಸಿದ ಕಾಮತ್, 9 ನೇ ತರಗತಿಯ ವಿದ್ಯಾರ್ಥಿಗಳು 10 ನೇ ತರಗತಿಗೆ ತಯಾರಿ ನಡೆಸಬೇಕಾಗಿರುವುದರಿಂದ ಅವರ ಪರೀಕ್ಷೆಗಾದರೂ ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಶಿಕ್ಷಣ ಇಲಾಖೆ ಸುತ್ತೋಲೆ ಕಾನೂನು ಬಾಹಿರ ಎಂದು ಏಕ ಸದಸ್ಯ ಪೀಠ ಹೊರಡಿಸಿರುವ ಆದೇಶದ ಅನ್ವಯ ಶಿಕ್ಷಣ ಇಲಾಖೆ ಬೋರ್ಡ್ ಮಟ್ಟದ ಪರೀಕ್ಷೆಗಳನ್ನು ನಡೆಸಬಾರದಿತ್ತು. ಶಿಕ್ಷಣದ ನೀತಿಯಲ್ಲಿ ವಿದ್ಯಾರ್ಥಿಗಳ ಮೇಲೆ ಅನಗತ್ಯವಾಗಿ ಗೊಂದಲ ಉಂಟಾಗುವಂತೆ ಮಾಡಬಾರದು. ಆದ್ದರಿಂದ ಬೋರ್ಡ್ ಪರೀಕ್ಷೆ ರದ್ದುಪಡಿಸಿದ್ದ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿರುವ ದ್ವಿಸದಸ್ಯ ಪೀಠದ ಆದೇಶಕ್ಕೆ ತಡೆ ನೀಡುತ್ತಿರುವುದಾಗಿ ನ್ಯಾಯಪೀಠ ತಿಳಿಸಿದೆ.
ಜತೆಗೆ, ದ್ವಿಸದಸ್ಯ ಪೀಠದ ಮುಂದೆ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯನ್ನು ಆದಷ್ಟು ಶೀಘ್ರವಾಗಿ ವಿಚಾರಣೆ ನಡೆಸಿ ಸೂಕ್ತ ಆದೇಶವನ್ನು ನೀಡುವಂತೆ ಸೂಚನೆ ನೀಡಿದೆ. ಅಲ್ಲದೆ, 11 ನೇಯ ತರಗತಿಯ(ಪ್ರಥಮ ಪಿಯುಸಿ) ಬೋರ್ಡ್ ಮಟ್ಟದ ಪರೀಕ್ಷೆಗಳು ಮುಕ್ತಾಯವಾಗಿರುವುದರಿಂದ ನ್ಯಾಯಪೀಠ, ಈ ಸಂಬಂಧ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ.
ಪ್ರಕರಣದ ಹಿನ್ನೆಲೆ ಏನು?: ಕರ್ನಾಟಕ ಶಿಕ್ಷಣ ಕಾಯಿದೆಯಡಿ ರಾಜ್ಯ ಶಿಕ್ಷಣ ಇಲಾಖೆ 2023ರ ಅಕ್ಟೋಬರ್ 6 ಮತ್ತು 9 ರಂದು ಎರಡು ಸುತ್ತೋಲೆಗಳನ್ನ ಹೊರಡಿಸಿ 5,8,9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಪರೀಕ್ಷೆ ನಡೆಸುವುದಕ್ಕೆ ತೀರ್ಮಾನಿಸಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರ ಸಂಘಗಳು, ಸರ್ಕಾರದ ಸುತ್ತೋಲೆ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಸೆಕ್ಷನ್ 30 ಮತ್ತು ಕರ್ನಾಟಕ ಶಿಕ್ಷಣ ಕಾಯಿದೆಯ ವಿವಿಧ ಸೆಕ್ಷನಗಳ ಉಲ್ಲಂಘನೆಯಾಗಿದ್ದು, ಬೋರ್ಡ್ ಪರೀಕ್ಷೆ ರದ್ದುಪಡಿಸಬೇಕು ಎಂದು ಕೋರಿದ್ದರು.
ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ, ಶಿಕ್ಷಣ ಇಲಾಖೆ ಸುತ್ತೋಲೆಗಳನ್ನು ರದ್ದುಪಡಿಸಿ ಆದೇಶಿಸಿತ್ತು. ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸರ್ಕಾರ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ವಿಚಾರಣೆ ನಡೆಸಿದ್ದ ದ್ವಿಸದಸ್ಯ ಪೀಠ, ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿತ್ತು. ಇದನ್ನು ಅರ್ಜಿದಾರರು ಸುಪ್ರೀಂಕೋರ್ಟ್ಗೆ ವಿಶೇಷ ಮೇಲ್ಮವಿ ಸಲ್ಲಿಸಿದ್ದರು.
ಇದನ್ನೂ ಓದಿ:ಭೋಜಶಾಲಾ ದೇವಾಲಯದ ಸಮೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್ ಆದೇಶ