ಮುಖ್ಯ ವೈದ್ಯಾಧಿಕಾರಿ ಡಾ. ಕೆ ನಾಗರಭಟ್ (ETV Bharat) ಚಿಕ್ಕೋಡಿ : ಗ್ರಾಮದೇವರ ಜಾತ್ರೆಯಲ್ಲಿ ಪ್ರಸಾದ ಸೇವಿಸಿ 55ಕ್ಕೂ ಹೆಚ್ಚು ಜನರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದಲ್ಲಿ ನಡೆದಿದೆ.
ಬುಧವಾರದಂದು ನಡೆದ ಗ್ರಾಮ ಜಾತ್ರೆಯಲ್ಲಿ ಪ್ರಸಾದ ರೂಪದಲ್ಲಿ ಸಾವಿರಕ್ಕೂ ಹೆಚ್ಚು ಗ್ರಾಮಸ್ಥರು ಊಟ ಮಾಡಿದ್ದಾರೆ. ಉಳಿದ ಅಡುಗೆಯನ್ನು ರಾತ್ರಿ ಹೊತ್ತಿಗೆ ನೂರಕ್ಕೂ ಹೆಚ್ಚು ಜನರು ಊಟ ಮಾಡಿದಾಗ ಅವರಿಗೆ ಫುಡ್ ಪಾಯಿಸನ್ ಆಗಿ 55ಕ್ಕೂ ಹೆಚ್ಚು ಜನರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಆರೋಗ್ಯದಲ್ಲಿ ಏರುಪೇರಾದಾಗ ಗ್ರಾಮಸ್ಥರು ಚಿಕ್ಕೋಡಿ ಹಾಗೂ ಯಕ್ಸಂಬಾ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಚಿಕ್ಕೋಡಿ ಮುಖ್ಯ ವೈದ್ಯಾಧಿಕಾರಿ ಡಾಕ್ಟರ್ ಕೆ. ನಾಗರಭಟ್ ಅವರು ಮಾತನಾಡಿ, ನಿನ್ನೆ ಕೆರೂರು ಗ್ರಾಮದ ಜಾತ್ರೆಯಲ್ಲಿ ಊಟ ಸವಿದ ಕೆಲವರ ಆರೋಗ್ಯದಲ್ಲಿ ಏರುಪೇರಾಗಿದೆ. ಇದುವರೆಗೂ ನಮ್ಮ ಆಸ್ಪತ್ರೆಯಲ್ಲಿ ಒಟ್ಟು 30 ಜನರನ್ನು ಅಡ್ಮಿಟ್ ಮಾಡಿಕೊಂಡಿದ್ದೇವೆ. ಯಕ್ಸಂಬಾ ಆಸ್ಪತ್ರೆಯಲ್ಲಿ 15 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ ಹತ್ತಕ್ಕೂ ಹೆಚ್ಚು ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿದೆ ಎಂದರು.
ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ, ಎಲ್ಲರ ಆರೋಗ್ಯದಲ್ಲೂ ಕೂಡ ಚೇತರಿಕೆ ಕಂಡುಬಂದಿದೆ. ಕೆರೂರು ಗ್ರಾಮದಲ್ಲಿ ಈಗಾಗಲೇ ನಮ್ಮ ವೈದ್ಯರ ತಂಡ ಬೀಡುಬಿಟ್ಟು ಗ್ರಾಮಸ್ಥರ ಆರೋಗ್ಯವನ್ನು ತಪಾಸಣೆ ಮಾಡುತ್ತಿದ್ದೇವೆ. 55 ಜನರಲ್ಲಿ ಸದ್ಯಕ್ಕೆ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ :ವಿಷಾಹಾರ ಸೇವನೆಯಿಂದ ಉದಯಪುರದಲ್ಲಿ ನಾಲ್ವರು ಸಾವು, ಹಲವರು ಗಂಭೀರ - Food Poison