ರಾಮನಗರ:ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಅಪಘಾತದಲ್ಲಿ ಐವರು ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಚನ್ನಪಟ್ಟಣ ತಾಲೂಕಿನ ಕೋಲೂರು ಗೇಟ್ ಬಳಿ ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿ ಲಾರಿಗೆ ಟಿಟಿ ವಾಹನ ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸೋಮಲಿಂಗಪ್ಪ, ಸೋಮಣ್ಣ ಹಾಗೂ ರಾಜೇಶ್ವರಿ ಎಂಬುವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಟಿಟಿ ವಾಹನ ತೆರಳುತ್ತಿತ್ತು. ಟಿಟಿ ವಾಹನ ಚಾಲಕ ಅತಿಯಾದ ವೇಗದಿಂದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಮೃತರು ಮೈಸೂರಿನ ಜಿಲ್ಲೆಗೆ ಸೇರಿದವರು ಎಂದು ತಿಳಿದು ಬಂದಿದೆ. ಭೀಕರ ಅಪಘಾತದಲ್ಲಿ ಟಿಟಿಯಲ್ಲಿದ್ದ ಐದಾರು ಮಂದಿಗೆ ಗಾಯಗಳಾಗಿವೆ. ಅವರನ್ನೆಲ್ಲ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚನ್ನಪಟ್ಟಣ ಸಂಚಾರಿ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕನಕಪುರದ ಅಪಘಾತದಲ್ಲಿ ಇಬ್ಬರು ಸಾವು:ಮತ್ತೊಂದು ಕಡೆ, ಕಬ್ಬಿಣದ ಸರಳು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಕನಕಪುರ – ಸಾತನೂರು ರಸ್ತೆ ಜಕ್ಕೇಗೌಡನ ಗ್ರಾಮದಲ್ಲಿ ನಡೆದಿದೆ. ಮೃತರು ಕೋಲ್ಕತ್ತಾ ಮೂಲದ ಕಾರ್ಮಿಕರು ಎಂದು ತಿಳಿದು ಬಂದಿದೆ. ಈ ಘಟನೆಯಲ್ಲಿ ಮತ್ತೊಬ್ಬ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಾರ್ಮಿಕರು BWSSB ಕುಡಿಯುವ ನೀರು ಪೈಪ್ ಲೈನ್ ಕಾಮಗಾರಿ ಮಾಡಲು ಬಂದಿದ್ದರು. ಇವರೆಲ್ಲ ಕನಕಪುರದಿಂದ ಜಕ್ಕೇಗೌಡನದೊಡ್ಡಿ ಕಡೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಟ್ರ್ಯಾಕ್ಟರ್ ಮೇಲೆ ಕುಳಿತಿದ್ದ ಇಬ್ಬರ ಮೇಲೆ ಕಬ್ಬಿಣದ ಸರಳುಗಳು ಬಿದ್ದ ಪರಿಣಾಮ ಅವರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು ಸಾತನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.