ಕರ್ನಾಟಕ

karnataka

ETV Bharat / state

5,8,9 ಮತ್ತು 11 ತರಗತಿ ಬೋರ್ಡ್ ಪರೀಕ್ಷೆ ರದ್ದು ಪಡಿಸಿದ ಹೈಕೋರ್ಟ್; ಮೇಲ್ಮನವಿ ಸಲ್ಲಿಸಲು ಸರ್ಕಾರದಿಂದ ಸಿದ್ಧತೆ

5,8,9 ಮತ್ತು 11 ತರಗತಿ ಬೋರ್ಡ್ ಪರೀಕ್ಷೆ ರದ್ದು ಪಡಿಸಿದ ಹೈಕೋರ್ಟ್ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದೆ.

board exam cancel  high court  government  appeal to court
ಮೇಲ್ಮನವಿ ಸಲ್ಲಿಸಲು ಸರ್ಕಾರದಿಂದ ಸಿದ್ಧತೆ

By ETV Bharat Karnataka Team

Published : Mar 6, 2024, 9:03 PM IST

ಬೆಂಗಳೂರು :ರಾಜ್ಯಪಠ್ಯ ಕ್ರಮವಿರುವ ಶಾಲೆಗಳ ಐದು, ಎಂಟು, ಒಂಭತ್ತು ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ಆದ್ರೆ ರಾಜ್ಯ ಸರ್ಕಾರ ಏಕ ಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದೆ.

ಪ್ರಕರಣದ ವಿವರ: ರಾಜ್ಯ ಪಠ್ಯಕ್ರಮದ ಶಾಲೆಗಳ 5, 8, 9 ಮತ್ತು 11ನೇ ತರಗತಿಗಳ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನದ ಬದಲಾಗಿ ರಾಜ್ಯ ಮಟ್ಟದ ಮಂಡಳಿ (ಬೋರ್ಡ್) ಪರೀಕ್ಷೆ ನಡೆಸಲು ತೀರ್ಮಾನಿಸಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು.

ಇದನ್ನು ಪ್ರಶ್ನಿಸಿ ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟ, ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳಿಗಾಗಿ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ನ್ಯಾಯಪೀಠ ಬುಧವಾರ ತೀರ್ಪು ಪ್ರಕಟಿಸಿತು. ಹೈ ಕೋರ್ಟ್‌ನ ಈ ಆದೇಶದಿಂದ ಇದೇ ಮಾರ್ಚ್ 13 ರಿಂದ 19 ರವರೆಗೂ ನಿಗದಿಯಾಗಿದ್ದ ಬೋರ್ಡ್ ಪರೀಕ್ಷೆಗಳು ರದ್ದಾದಂತಾಗಿದೆ. ಅಲ್ಲದೆ ಸೆಕ್ಷನ್​ 22ರ ಪ್ರಕಾರ ವಿದ್ಯಾರ್ಥಿಗಳ ಪರೀಕ್ಷಾ ವ್ಯವಸ್ಥೆಯ ಮೂಲಕ ಆಂತರಿಕ ಅಥವಾ ಬಾಹ್ಯ ಮೌಲ್ಯಮಾಪನ ಮಾಡುವುದಕ್ಕಾಗಿ ನಿಯಮಗಳಿಗೆ ತಿದ್ದುಪಡಿ ಮಾಡಬೇಕು ಎಂದು ಹೇಳಲಾಗಿದೆ.

ಸೆಕ್ಷನ್​ 145 (4)ರ ಪ್ರಕಾರ ಯಾವುದೇ ನಿಯಮಗಳಲ್ಲಿ ಬದಲಾವಣೆ ಮಾಡಬೇಕಾದಲ್ಲಿ ಶಾಸನ ಸಭೆಯಲ್ಲಿ ಚರ್ಚಿಸಿದ ಬಳಿಕ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಲಾಗಿದೆ. ಆದರೆ, ಶಿಕ್ಷಣ ಇಲಾಖೆ ಬೋರ್ಡ್ ಪರೀಕ್ಷೆ ನಡೆಸುವುದಕ್ಕೆ ಈ ರೀತಿಯ ಯಾವುದೇ ನಿಯಮಗಳಿಗೆ ತಿದ್ದುಪಡಿ ಮಾಡಿಲ್ಲ. ಆದ್ದರಿಂದ ಬೋರ್ಡ್ ಪರೀಕ್ಷೆ ನಡೆಸುವುದಕ್ಕೆ ಮುಂದಾಗಿರುವ ಕ್ರಮ ಶಿಕ್ಷಣ ಕಾಯ್ದೆ ಸೆಕ್ಷನ್​ 22ಕ್ಕೆ ತದ್ವಿರುದ್ಧವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ದೊಡ್ಡ ಮಟ್ಟದ ವಿದ್ಯಾರ್ಥಿಗಳಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಸರ್ಕಾರ ಬದಲಾವಣೆ ತರಬೇಕಾದಲ್ಲಿ ಯಾವುದೇ ಆಕ್ಷೇಪಗಳು ಇಲ್ಲದಂತೆ ಮತ್ತು ಕಡ್ಡಾಯವಾಗಿ ನಿಗದಿ ಪಡಿಸಿರುವ ಕಾರ್ಯವಿಧಾನದ ಮೂಲಕ ತರಬೇಕಾಗುತ್ತದೆ. ಹೀಗಾಗಿ ಶಿಕ್ಷಣ ಇಲಾಖೆ ಸುತ್ತೋಲೆ ದೋಷಪೂರಿತವಾಗಿದೆ ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ರಾಜ್ಯ ಶಿಕ್ಷಣ ಇಲಾಖೆ ಶಿಕ್ಷಣ ಕಾಯ್ದೆಯಡಿ 2023ರ ಅಕ್ಟೋಬರ್ 6 ಮತ್ತು 9 ರಂದು ಎರಡು ಸುತ್ತೋಲೆಗಳನ್ನ ಹೊರಡಿಸಿ ಬೋರ್ಡ್ ಮಟ್ಟದ ಪರೀಕ್ಷೆ ನಡೆಸುವುದಕ್ಕೆ ತೀರ್ಮಾನಿಸಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರ‌ ಸಂಘ, ಪರೀಕ್ಷಾ ವ್ಯವಸ್ಥೆಯಲ್ಲಿ ಯಾವುದೇ ನಿಯಮಗಳನ್ನು ಬದಲಾವಣೆ ಮಾಡಬೇಕಾದಲ್ಲಿ ವಿಧಾನ ಮಂಡಲದಲ್ಲಿ ಚರ್ಚೆ ನಡೆಸಿ ತೀರ್ಮಾನಕ್ಕೆ ಬರಬೇಕಾಗುತ್ತದೆ. ಆದರೆ, ಸರ್ಕಾರ ಯಾವುದೇ ಚರ್ಚೆ ನಡೆಸದೆ ತೀರ್ಮಾನ ತೆಗೆದುಕೊಂಡಿದ್ದ ಸುತ್ತೋಲೆ ಮೂಲಕ ಪರೀಕ್ಷೆ ನಡೆಸುವುದಕ್ಕೆ ಮುಂದಾಗಿತ್ತು. ಆದ್ದರಿಂದ ಸುತ್ತೋಲೆ ರದ್ದುಮಾಡಬೇಕು ಎಂದು ಕೋರಿದರು.

ಸರ್ಕಾರದ ಪರ ವಕೀಲರು, ಶಾಸನ ಸಭೆಯಲ್ಲಿ ಚರ್ಚೆ ನಡೆಸದೆಯೂ ಶಿಕ್ಷಣ ಇಲಾಖೆಗೆ ನಿಯಮಗಳನ್ನು ರೂಪಿಸುವುದಕ್ಕೆ ಅವಕಾಶವಿದೆ. ಈ ಸಂಬಂಧ ಕುಸ್ಮಾ ಪ್ರಕರಣದಲ್ಲಿ ನ್ಯಾಯಲಯ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಶಿಕ್ಷಣ ಇಲಾಖೆ ಈ ನಿಯಮಗಳನ್ನು ರೂಪಿಸಲಾಗಿದೆ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ವಾದ ಮಂಡಿಸಿದ್ದರು. ಅರ್ಜಿದಾರರ ಪರವಾಗಿ ಕೆ.ವಿ.ಧನಂಜಯ್ ಮತ್ತು ಅನಿರುದ್ಧ ಕುಲಕರ್ಣಿ ವಾದ ಮಂಡಿಸಿದ್ದರು.

ಗುರುವಾರ ಮೇಲ್ಮನವಿ ಸಲ್ಲಿಕೆ : ಏಕ ಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರವು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದೆ. ಗುರುವಾರವೇ ಮೇಲ್ಮನವಿಯನ್ನು ಸಲ್ಲಿಸಿ, ಅದನ್ನು ವಿಚಾರಣೆ ನಡೆಸಲು ಬೆಳಗಿನ ಕಲಾಪದಲ್ಲಿ ವಿಭಾಗೀಯ ಪೀಠವನ್ನು ಕೋರಲು ಸರ್ಕಾರ ತೀರ್ಮಾನಿಸಿದೆ. ಮಾ.11ರಂದು ಬೋರ್ಡ್‌ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ. ಈ ಹಂತದಲ್ಲಿ ಏಕ ಸದಸ್ಯ ಪೀಠ, ಶಿಕ್ಷಣ ಇಲಾಖೆ ಸುತ್ತೋಲೆ ರದ್ದುಪಡಿಸಿರುವ ಕಾರಣ ಪರೀಕ್ಷೆ ನಡೆಸಲು ಹಲವು ಸಮಸ್ಯೆ ಎದುರಾಗಲಿವೆ. ಆದ್ದರಿಂದ ತುರ್ತಾಗಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿ, ಏಕ ಸದಸ್ಯ ಪೀಠದ ತೀರ್ಪಿಗೆ ತಡೆಯಾಜ್ಞೆ ನೀಡಲು ವಿಭಾಗೀಯ ಪೀಠವನ್ನು ಸರ್ಕಾರ ಕೋರಲಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಓದಿ:ಗೌರಿಗೆ ಒಲಿದ ಗಂಗೆ: ಮಹಿಳೆಯ ಭಗೀರಥ ಸಾಹಸಕ್ಕೆ 50 ಅಡಿಯ ಬಾವಿಯಲ್ಲಿ ಚಿಮ್ಮಿದ ನೀರು

ABOUT THE AUTHOR

...view details