ಕರ್ನಾಟಕ

karnataka

ETV Bharat / state

ಹಿಮೋಫಿಲಿಯಾ ಕಾಯಿಲೆ ಬಗ್ಗೆ 44 ವರ್ಷ ಅಧ್ಯಯನ: ಡಾ.ಸುರೇಶ್ ಹನಗವಾಡಿಗೆ ದಕ್ಕಿದ ವಿಕಲಚೇತನರ ರಾಷ್ಟ್ರೀಯ ಪ್ರಶಸ್ತಿ! ‌ - NATIONAL AWARD FOR DR SURESH

ಡಾ.ಸುರೇಶ್ ಅವರು ದೇಶದಲ್ಲಿಯೇ ಹಿಮೋಫಿಲಿಯಾ, ತಲಸ್ಸೇಮಿಯಾ ಸೇರಿದಂತೆ ವಿರಳ ರಕ್ತಸ್ರಾವ ರೋಗಗಳಿಗೆ ಸಂಬಂಧಿಸಿದಂತೆ ಅತ್ಯುತ್ತಮ ಚಿಕಿತ್ಸಾ ಕೇಂದ್ರವನ್ನು ದಾವಣಗೆರೆ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ ಸ್ಥಾಪಿಸಿದ್ದಾರೆ.

Dr. Suresh Hanagavadi
ಡಾ.ಸುರೇಶ್ ಹನಗವಾಡಿ (ETV Bharat)

By ETV Bharat Karnataka Team

Published : Nov 9, 2024, 7:35 PM IST

ದಾವಣಗೆರೆ: ಅತಿ ದುಬಾರಿ ವೆಚ್ಚದ ಹಿಮೋಫಿಲಿಯಾ ಚಿಕಿತ್ಸೆ ಸರ್ಕಾರದಿಂದ ಉಚಿತವಾಗಿ ದೇಶಾದ್ಯಂತ ದೊರಕಲು ಕಾರಣಕರ್ತರಾಗಿರುವ ಡಾ.ಸುರೇಶ್ ಹನಗವಾಡಿ ಅವರು ಕೇಂದ್ರ ಸರ್ಕಾರದಿಂದ ವಿಕಲಚೇತನರ ಸಬಲೀಕರಣಕ್ಕಾಗಿ ಕೊಡುವ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2024ನೇ ಸಾಲಿನ ಪ್ರಶಸ್ತಿ ಭಾಜನರಾಗಿರುವ ಡಾ.ಸುರೇಶ್ ಹನಗವಾಡಿ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ನಿವಾಸಿ ಆಗಿರುವ ಅವರು ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಪೆಥಾಲಜಿ ವಿಭಾಗದ ಪ್ರಾಧ್ಯಾಪಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಾ.ಸುರೇಶ್ ಅವರು ಹಿಮೋಫಿಲಿಯಾ ಎಂಬ ಕಾಯಿಲೆ ಬಗ್ಗೆ ಸತತ 44 ವರ್ಷಗಳ ಕಾಲ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಇನ್ನು ದೇಶ ವಿದೇಶ ಸುತ್ತಾಡಿ ಹಿಮೋಫಿಲಿಯಾ ರೋಗಿಗಳ ಕಷ್ಟಗಳನ್ನು ಆಲಿಸಿ ಸರ್ಕಾರ ಮತ್ತು ಸಾರ್ವಜನಿಕರಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ದೇಶದಲ್ಲಿಯೇ ಹಿಮೋಫಿಲಿಯಾ, ತಲಸ್ಸೇಮಿಯಾ ಸೇರಿದಂತೆ ವಿರಳ ರಕ್ತಸ್ರಾವ ರೋಗಗಳಿಗೆ ಸಂಬಂಧಿಸಿದಂತೆ ಅತ್ಯುತ್ತಮ ಚಿಕಿತ್ಸಾ ಕೇಂದ್ರವನ್ನು ದಾವಣಗೆರೆ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ ಡಾ.ಸುರೇಶ್ ಅವರು ಸ್ಥಾಪಿಸಿದ್ದಾರೆ. ಇಲ್ಲಿ ಅನ್ಯ ರಾಜ್ಯದ ರೋಗಿಗಳು ಒಳಗೊಂಡಂತೆ ಸಾವಿರಾರು ರೋಗಿಗಳಿಗೆ ಉತ್ಕೃಷ್ಠ ಗುಣಮಟ್ಟದ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ.

ಡಾ.ಸುರೇಶ್ ಹನಗವಾಡಿ ಅವರ ಪ್ರತಿಫಲಾಪೇಕ್ಷೆ ಇಲ್ಲದ ನಿಸ್ವಾರ್ಥ ಸೇವೆಗೆ ಈಗಾಗಲೇ ಹತ್ತಾರು ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳು ಸಂದಿವೆ. ಇದೀಗ ಅಂಗವಿಕಲತೆ ತಡೆಗಟ್ಟುವ ಕಾರ್ಯದಲ್ಲಿ ನಿರತರಾಗಿರುವ ಅವರಿಗೆ ರಾಷ್ಟ್ರಪತಿ, ವಿಕಲಚೇತನ ದಿನಾಚರಣೆಯಂದು ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.

ಡಾ.ಸುರೇಶ್ ಹನಗವಾಡಿ ಅವರು ಪ್ರತಿಕ್ರಿಯಿಸಿ "ಈ ಪ್ರಶಸ್ತಿ ದಕ್ಕಿರುವುದು ಸಾಕಷ್ಟು ಸಂತಸ ತಂದಿದೆ. 44 ವರ್ಷಗಳ ಕಾಲ ಮಾಡಿರುವ ಸೇವೆಗೆ ದಕ್ಕಿರುವ ಪ್ರಶಸ್ತಿ ಇದು. ಕೇಂದ್ರ ಸರ್ಕಾರ ಕೊಡುವ ಪ್ರಶಸ್ತಿಗೆ ನಾನು ಆಯ್ಕೆ ಆಗಿರುವುದು ಇನ್ನು ನಂಬಲಾಗುತ್ತಿಲ್ಲ" ಎಂದು ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ:ಆಸ್ಕರ್​​ ಪ್ರವೇಶಿಸಿದ ಕನ್ನಡ ಕಿರುಚಿತ್ರ 'ಸನ್​ಫ್ಲವರ್ಸ್​​ ವೇರ್​ ದಿ ಫಸ್ಟ್ ಒನ್ಸ್ ಟು ನೋ': ಕೇನ್ಸ್​​​ ಅವಾರ್ಡ್​​ ಬಳಿಕ ಮತ್ತೊಂದು ಮೈಲಿಗಲ್ಲು

ABOUT THE AUTHOR

...view details