ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೆ ನಶೆಯ ಘಾಟು ಅಧಿಕವಾಗುತ್ತಿದೆ. ಜನರನ್ನು ಡ್ರಗ್ಸ್ ಎಂಬ ಮಾಯೆಯೊಳಗೆ ಸಿಲುಕಿಸಿ ಅಕ್ರಮವಾಗಿ ಹಣ ಸಂಪಾದಿಸಲು ದಂಧೆಕೋರರು ಅವ್ಯಾಹತವಾಗಿ ತೊಡಗಿಸಿಕೊಂಡಿದ್ದಾರೆ. ಮತ್ತೊಂದೆಡೆ, ಡ್ರಗ್ಸ್ ಮುಕ್ತ ಸಮಾಜದ ಪಣ ತೊಟ್ಟಿರುವ ನಗರ ಪೊಲೀಸರು ನಿರಂತರ ಕಾರ್ಯಾಚರಣೆ ಕೈಗೊಳ್ಳುತ್ತಿದ್ದಾರೆ.
4 ತಿಂಗಳಲ್ಲಿ 437 ಕೆಜಿ ಡ್ರಗ್ಸ್ ಸೀಜ್!:ಡ್ರಗ್ಸ್ಗೆ ಕಡಿವಾಣ ಹಾಕಲು ಪಣತೊಟ್ಟಿರುವ ಪೊಲೀಸರು ಕಳೆದ ನಾಲ್ಕು ತಿಂಗಳಲ್ಲಿ 161 ಪ್ರಕರಣಗಳನ್ನು ದಾಖಲಿಸಿದ್ಧಾರೆ. ಸುಮಾರು 18 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಏಪ್ರಿಲ್ ಅಂತ್ಯಕ್ಕೆ 161 ಡ್ರಗ್ಸ್ ಪ್ರಕರಣ ದಾಖಲಿಸಿ 220 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪೈಕಿ 27 ಮಂದಿ ವಿದೇಶಿ ಪ್ರಜೆಗಳು ಸಹ ಸೇರಿದ್ದಾರೆ. ಗಾಂಜಾ ಸೇರಿದಂತೆ ಇನ್ನಿತರ ಸಿಂಥೆಟಿಕ್ ಡ್ರಗ್ಸ್ ಒಳಗೊಂಡಂತೆ 437 ಕೆಜಿ ಮಾದಕವಸ್ತುಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಪೈಕಿ ಗಾಂಜಾವೇ (416 ಕೆಜಿ) ಸಿಂಹಪಾಲು ಪಡೆದುಕೊಂಡಿದೆ.
ಮಾರಾಟಗಾರರ ವಿರುದ್ಧ ಮಾತ್ರ ಕೇಸ್:ಡ್ರಗ್ಸ್ ವಿರುದ್ಧ ಸಮರ ಸಾರಿರುವ ಪೊಲೀಸರು ಕಳೆದ ಜನವರಿಯಲ್ಲಿ 36, ಫೆಬ್ರವರಿಯಲ್ಲಿ 46, ಮಾರ್ಚ್ನಲ್ಲಿ 37 ಹಾಗೂ ಏಪ್ರಿಲ್ನಲ್ಲಿ 42 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಮಾತ್ರ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಡ್ರಗ್ಸ್ ಖರೀದಿಸಿ ಸೇವನೆ ಮಾಡುವವರ ವಿರುದ್ಧ ಈ ವರ್ಷ ಯಾರ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಡ್ರಗ್ಸ್ ಸೇವನೆ ಮಾಡಿದ ಆರೋಪದಡಿ ಕೆಲವರನ್ನು ಸುಖಾಸುಮ್ಮನೆ ಠಾಣೆಗೆ ಕರೆದುಕೊಂಡು ದಿನಗಟ್ಟಲೇ ಕೂರಿಸಿ, ಅವರಿಂದ ಹಣಕ್ಕೆ ಬೇಡಿಕೆಯಿಡುತ್ತಿರುವ ನಿರಂತರ ದೂರುಗಳು ಬರುತ್ತಿವೆ. ಆದ್ದರಿಂದ ಈ ಕ್ರಮ ಕೈಗೊಂಡಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.