ಬೆಂಗಳೂರು: ರಾಜ್ಯಾದ್ಯಂತ ಜು.13 ರಂದು ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ವಿವಾದ ಪೂರ್ವ ಪ್ರಕರಣಗಳು ಸೇರಿ ಒಟ್ಟು 40 ಲಕ್ಷ ಪ್ರಕರಣಗಳ ಇತ್ಯರ್ಥ ಪಡಿಸುವ ಮೂಲಕ ಇತಿಹಾಸ ದಾಖಲಾಗಿದೆ.
ಈ ಕುರಿತಂತೆ ಹೈಕೋರ್ಟ್ನ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ವಿ.ಕಾಮೇಶ್ವರ್ ರಾವ್, ಬೆಂಗಳೂರು, ಧಾರವಾಡ ಮತ್ತು ಕಲಬುರಗಿಯ ಹೈಕೋರ್ಟ್ ಪೀಠಗಳಲ್ಲಿ 17 ಅದಾಲತ್ ಪೀಠಗಳು ಕಾರ್ಯನಿರ್ವಹಿಸಿದ್ದು, ಒಟ್ಟು 1,655 ಅರ್ಜಿಗಳನ್ನು ಇತ್ಯರ್ಥ ಗೊಳಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ 1,016 ಪೀಠಗಳು ಕಾರ್ಯನಿರ್ವಹಿಸಿ 40,01,786 ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದು, ಒಟ್ಟು 2,640 ಕೋಟಿ ರೂ.ಗಳ ಪರಿಹಾರವನ್ನು ಕೊಡಿಸಿರುವುದಾಗಿ ವಿವರಿಸಿದರು.
ಅಲ್ಲದೆ, ವೈವಾಹಿಕ ವಿವಾದಗಳಿಗೆ ಸಂಬಂಧಿಸಿದಂತೆ ಒಟ್ಟು 1,550 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಅದರಲ್ಲಿ 259 ದಂಪತಿಗಳು ಮತ್ತೆ ಒಂದುಗೂಡಿವೆ. 3,356 ವಿಭಾಗದ ದಾವೆಗಳನ್ನು ಇದೇ ಸಂದರ್ಭದಲ್ಲಿ ಇತ್ಯರ್ಥ ಪಡಿಸಲಾಗಿದೆ. 11,155 ಚೆಕ್ ಬೌನ್ಸ್ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. 261 ಭೂಸ್ವಾಧೀನ ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದು, 101 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ. 897 ಮೋಟಾರು ವಾಹನ ವಿವಾದಗಳನ್ನು ಇತ್ಯರ್ಥ ಪಡಿಸಿದ್ದು, 61 ಕೋಟಿ ರೂ. ಪರಿಹಾರ ನೀಡಲಾಗಿದೆ. 15 ರೇರಾ ಪ್ರಕರಣಗಳ ಇತ್ಯರ್ಥ ಪಡಿಸಿ 1.22 ಕೋಟಿ ರೂ.ಪರಿಹಾರ ನೀಡಲಾಗಿದೆ. 69 ಗ್ರಾಹಕ ವ್ಯಾಜ್ಯಗಳ ಇತ್ಯರ್ಥ ಪಡಿಸಿದ್ದು, 3.92 ಲಕ್ಷ ರೂ.ಗಳ ಪರಿಹಾರ ನೀಡಲಾಗಿದೆ. ಅಲ್ಲದೆ, 3,769 ಇತರೆ ಪ್ರಕರಣಗಳನ್ನು ಇತ್ಯರ್ಥ ಪಡಿಸಿ 118 ಕೋಟಿ ರೂ.ಗಳ ಪರಿಹಾರ ಕೊಡಿಸಲಾಗಿದೆ ಎಂದು ತಿಳಿಸಿದರು.