ಹಾವೇರಿ: ಜಿಲ್ಲೆಯ ಅರಳೇಶ್ವರ ಗ್ರಾಮದಲ್ಲಿ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಕ್ಕಾಗಿ ದೇವಳ ಸಮಿತಿಯೇ ಬೋರ್ವೆಲ್ ತೆಗೆದಿದ್ದು ಬರಗಾಲದಲ್ಲೂ 4 ಇಂಚು ನೀರು ಸಿಕ್ಕಿದೆ.
ಹಾನಗಲ್ ತಾಲೂಕಿನ ಮಧ್ಯಮ ಗಾತ್ರದ ಗ್ರಾಮಗಳಲ್ಲಿ ಅರಳೇಶ್ವರ ಗ್ರಾಮವೂ ಒಂದು. ಇಲ್ಲಿ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗುತ್ತದೆ. ಆದರೆ ಈ ವರ್ಷ ಜಾತ್ರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಿಗೆ ನೀರಿನ ಆಭಾವ ತಲೆದೋರಿದ್ದರಿಂದ ಊರಿನ ಯುವಕರ ತಂಡ, ದೇವಳದ ಸಮಿತಿ ಸೇರಿ ಬೋರ್ವೆಲ್ ಕೊರೆಯಿಸಿ ನೀರು ಕಂಡುಕೊಂಡಿದ್ದಾರೆ.
ಈ ಬಗ್ಗೆ ಗ್ರಾಮಸ್ಥ ಬಸವರಾಜ್ ಮಾತನಾಡಿ, "ಗ್ರಾಮಸ್ಥರು ಎಂಟು ದಿನಗಳ ಕಾಲ ನಡೆಯುವ ರುದ್ರಾಭಿಷೇಕ, ಅನ್ನದಾಸೋಹಕ್ಕೆ ಟ್ಯಾಂಕರ್ ನೀರು ಹಾಕಿಸುವ ವಿಚಾರದಲ್ಲಿದ್ದರು. ಆದರೆ ದೇವಸ್ಥಾನ ಸಮಿತಿಯವರು ಕುಳಿತು ವಿಚಾರ ಮಾಡಿ ಗ್ರಾಮ ಪಂಚಾಯತ್‌ಗೆ ಮನವಿ ಮಾಡಿದರು. ಆದರೂ ಯಾವುದೇ ಪ್ರಯೋಜನವಾಗಲಿಲ್ಲಾ. ಬಳಿಕ ದೇವಸ್ಥಾನ ಸಮಿತಿಯವರೇ ಕುಳಿತುಕೊಂಡು ಯುವಕರ ತಂಡ ಮಾಡಿದರು. ದೇವಸ್ಥಾನದ ಕಾರ್ಯಕ್ರಮದಲ್ಲಿ ಈ ರೀತಿ ಕೊಳವೆ ಬಾವಿ ಕೊರೆಸುವ ಚಿಂತನೆ ಬಗ್ಗೆ ಪ್ರಸ್ತಾಪಿಸಿದರು. ಅಲ್ಲಿದ್ದ ಯುವಕರು ಹಿರಿಯರ ಅಣತಿ ಮೇರೆಗೆ ಮಲ್ಲಿಕಾರ್ಜುನ ಯುವಬಳಗ ರಚಿಸಿಕೊಂಡು ಕೊಳವೆಬಾವಿ ಕೊರೆಸಲು ಮುಂದಾದರು. ಈ ಸಂಘದ ಸದಸ್ಯರು ತಮ್ಮ ಕೈಲಾದ ಹಣ ಹಾಕಿ, ಸುಮಾರು 76 ಸಾವಿರ ರೂಪಾಯಿ ಸೇರಿಸಿದರು. ಅದರಿಂದ ಉತ್ತೇಜಿತರಾದ ಯುವಕರು ಕೇವಲ 12 ಗಂಟೆಯಲ್ಲಿಯೇ ಹಣ ಸೇರಿಸಿ ಪಕ್ಕದ ಗ್ರಾಮದ ಬಾಲಕನಿಂದ ನೀರಿನ ನೆಲೆ ಕಂಡುಕೊಂಡು ಅಲ್ಲಿಯೇ ಕೊಳವೆಬಾವಿ ಕೊರೆಸಲು ಮುಂದಾದರು. ಯುವ ಬಳಗದ ಅದೃಷ್ಟಕ್ಕೆ ದೇವಸ್ಥಾನದ ಪಕ್ಕದ ಹೊಂಡದ ದಂಡೆಯ ಮೇಲೆ ತೆಗೆಯಿಸಿದ ಕೊಳವೆಬಾವಿಯಲ್ಲಿ ಸುಮಾರು ನಾಲ್ಕು ಇಂಚು ನೀರು ಸಿಕ್ಕಿದೆ" ಎಂದು ತಿಳಿಸಿದರು.