ಚಾಮರಾಜನಗರ :ಮಧ್ಯಾಹ್ನದ ಬಿಸಿಯೂಟ ಸೇವಿಸಿ ವಾಂತಿ ಕಾಣಿಸಿಕೊಂಡ ಹಿನ್ನೆಲೆ ಸುಮಾರು 31 ಮಕ್ಕಳು ಅಸ್ವಸ್ಥರಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚಿರಕನಹಳ್ಳಿಯಲ್ಲಿ ಶುಕ್ರವಾರ ನಡೆದಿದೆ. ಚಿರಕನಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7ನೇ ತರಗತಿಯಲ್ಲಿ ಒಟ್ಟು 35 ಮಂದಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇದರಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ತಯಾರಿಸಿದ್ದ ಹುರುಳಿ ಮೊಳಕೆ ಕಾಳಿನ ಸಾಂಬರ್ ಸೇವಿಸಿ 14 ಮಂದಿ ಮಕ್ಕಳಿಗೆ ವಾಂತಿ ಕಾಣಿಸಿಕೊಂಡಿದೆ.
ಕೂಡಲೇ ವಿದ್ಯಾರ್ಥಿಗಳನ್ನು ಬೊಮ್ಮನಹಳ್ಳಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿದೆ. ಇದರಿಂದ ಮಕ್ಕಳು ಚೇರಿಸಿಕೊಂಡಿದ್ದಾರೆ. ಉಳಿದ 17 ಮಂದಿ ವಿದ್ಯಾರ್ಥಿಗಳಿಗೆ ಮಾತ್ರೆ ನೀಡಿ ಮನೆಗೆ ಕಳುಹಿಸಲಾಗಿತ್ತು. ನಂತರ ಪೋಷಕರ ಒತ್ತಾಯದ ಮೇರೆಗೆ ಅಸ್ವಸ್ಥಗೊಂಡಿದ್ದ 14 ಹಾಗೂ ಮನೆಗೆ ತೆರಳಿದ್ದ 17 ಮಂದಿ ಸೇರಿದಂತೆ ಒಟ್ಟು 31 ಮಕ್ಕಳನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ವಾಸನೆ ಬರುತ್ತಿದ್ದ ಸಾಂಬರ್ : ಮಧ್ಯಾಹ್ನದ ಬಿಸಿಯೂಟಕ್ಕೆ ತಯಾರಿಸಿದ್ದ ಹುರುಳಿ ಮೊಳಕೆ ಕಾಳನ್ನು ನಾಲ್ಕೈದು ದಿನಗಳ ಹಿಂದೆಯೇ ಕಟ್ಟಿ ಇಡಲಾಗಿತ್ತು. ಇದರಿಂದ ಮೊಳಕೆ ಕಾಳು ವಾಸನೆ ಬರುತ್ತಿತ್ತು. ಅದನ್ನೇ ಹಾಕಿ ಸಾಂಬರ್ ಮಾಡಿಲಾಗಿದೆ. ಆ ಬಳಿಕವೂ ಹೆಚ್ಚಿನ ವಾಸನೇ ಬರುತ್ತಿತ್ತು. ಹೀಗಿದ್ದರೂ ಕೂಡ ಅಡುಗೆಯವರು ಸಾಂಬರ್ ಮಾಡಿ ಬಡಿಸಿದ ಕಾರಣ ಮಕ್ಕಳು ಅದನ್ನು ಸೇವನೆ ಮಾಡಿದ್ದಾರೆ. ವಾಸನೆ ಬರುತ್ತಿರುವ ಕುರಿತು ಮಕ್ಕಳೇ ನಮಗೆ ಹೇಳಿದ್ದಾರೆ ಎಂದು ಪೋಷಕರಾದ ಸುರೇಶ್ ಎಂಬವರು ಆರೋಪಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ :ಚಿರಕನಹಳ್ಳಿ ಶಾಲೆಯಲ್ಲಿ ಮಕ್ಕಳು ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡ ಮಾಹಿತಿ ಅರಿತ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್ ಕೂಡಲೇ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳು ಸೇವಿಸಿರುವ ಅಡುಗೆಯ ಸ್ಯಾಂಪಲ್ ಪಡೆದು ಪರೀಕ್ಷೆಗೆ ಕಳುಹಿಸಿದ್ದಾರೆ. ಜೊತೆಗೆ ಮಕ್ಕಳ ಆರೋಗ್ಯ ವಿಚಾರಣೆ ನಡೆಸಿ ಸೂಕ್ತ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ :ಧರಣಿ ಕುಳಿತಿದ್ದ ಕಾಂಗ್ರೆಸ್ ಮುಖಂಡನ ಮೇಲೆ ಗುಬ್ಬಿ ಶಾಸಕರ ಬೆಂಬಲಿಗರಿಂದ ಹಲ್ಲೆ ಆರೋಪ, ದೂರು ದಾಖಲು