ಚಿಕ್ಕಮಗಳೂರು :ಜಿಲ್ಲೆಯ ತರೀಕೆರೆ ತಾಲೂಕಿನ ಕೆರೆ ಹೊಸಹಳ್ಳಿ ಗ್ರಾಮದಲ್ಲಿ ಧಾರಾಕಾರ ಮಳೆಗೆ 300 ವರ್ಷದ ಅರಳಿಮರ ಧರೆಗೆ ಉರುಳಿದೆ. ಹೀಗಾಗಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಮಧ್ಯರಾತ್ರಿಯಿಂದಲೂ ತರೀಕೆರೆ ಸುತ್ತಮುತ್ತ ಭಾರಿ ಮಳೆ ಸುರಿಯುತ್ತಿದೆ.
ರಾತ್ರಿ ಸುರಿದ ಭಾರಿ ಮಳೆಗೆ ಕಡೂರು ತಾಲೂಕಿನ ಗೌಡನಕಟ್ಟೆ ಕೆರೆಯ ಏರಿ ಒಡೆದು ನೀರು ಪೋಲಾಗಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಸುರಿದ ಮಳೆಗೆ ಕೆರೆ ಭರ್ತಿಯಾಗಿತ್ತು. ಏರಿ ತುಂಡಾದ ಪರಿಣಾಮ ಪಿ ಕೋಡಿಹಳ್ಳಿ ಕೆರೆಗೆ ನೀರಿನ ಹರಿವು ಹೆಚ್ಚಾಗಿದೆ. ಭಾರಿ ಪ್ರಮಾಣದ ನೀರಿನ ಒತ್ತಡ ತಡೆಯಲಾಗದೆ ಈ ಅವಘಡ ಜರುಗಿದೆ. ಇದರಿಂದಾಗಿ ಕೆರೆ ಏರಿ ಹಿಂಭಾಗದ ತೋಟ, ಜಮೀನುಗಳು ಜಲಾವೃತವಾಗಿವೆ.
ಮೂಡಿಗೆರೆ ತಾಲೂಕಿನಾದ್ಯಂತ ಮುಂದುವರೆದ ಮಳೆ :ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ ಸುತ್ತಮುತ್ತ ಭಾರಿ ಮಳೆ ಸುರಿದಿದೆ. ಬಣಕಲ್, ಬಾಳೂರು, ಜಾವಳಿ, ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿಯಲ್ಲಿ ಮಳೆ ಅಬ್ಬರ ಜೋರಾಗಿದೆ. ಮೂಡಿಗೆರೆ ತಾಲೂಕಿನ ಹತ್ತು ಹಲವು ಗ್ರಾಮಗಳಲ್ಲಿ ವರುಣದೇವ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಭಾರಿ ಮಳೆ ಹಿನ್ನೆಲೆ ಕೊಟ್ಟಿಗೆಹಾರದಲ್ಲಿ ವಾಹನಗಳು ಸಂಚರಿಸದೇ ನಿಂತಲ್ಲಿಯೇ ನಿಂತುಕೊಂಡಿವೆ.
ಕಳೆದ 8 -10 ದಿನಗಳಿಂದ ಕೊಟ್ಟಿಗೆಹಾರದಲ್ಲಿ ಸಾಧಾರಣ ಮಳೆಯಾಗಿತ್ತು. ಇಂದು ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದಿದೆ. ಇದರಿಂದಾಗಿ ರಸ್ತೆಯಲ್ಲಿ ಮಳೆ ನೀರು ನಿಲ್ಲಲು ಪ್ರಾರಂಭವಾಗಿದೆ. ಕಾಫಿನಾಡ ಬಯಲುಸೀಮೆ ಭಾಗದಲ್ಲಿ ಧಾರಾಕಾರ ಮಳೆ ಆಗುತ್ತಿದ್ದು, ಅರ್ಧ ಗಂಟೆಗಳವರೆಗೆ ಭಾರಿ ಮಳೆ ಸುರಿದಿದೆ.