ರಾಯಚೂರು:ತಬಲಾ ಕಲಾವಿದ ಎ.ಎನ್. ಸದಾಶಿವಪ್ಪ ಹಾಗೂ ಸೂಲಗಿತ್ತಿ ಮಲ್ಲಮ್ಮನಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಲಭಿಸಿದೆ.
ನಗರದ ಮಡ್ಡಿಪೇಟೆ ನಿವಾಸಿ ಸದಾಶಿವಪ್ಪ ಅವರು 1940 ಸೆ.2 ರಂದು ಜನಿಸಿದರು. 55 ವರ್ಷಗಳಿಂದ ತಬಲಾ ಕಲಾವಿದರಾಗಿ, ಶಾಸ್ತ್ರೀಯ ಸಂಗೀತ, ಗಜಲ್ ಮತ್ತು ನಾಟಕ, ಜನಪದ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಲಾವಿದರಿಗೆ ಮತ್ತು 25 ವರ್ಷಗಳಿಂದ ಆಕಾಶವಾಣಿ, ದೂರದರ್ಶನ ನಡೆಯುವ ವಿವಿಧ ಸಂಗೀತ ವಿದ್ವಾಂಸರ ಕಾರ್ಯಕ್ರಮದಲ್ಲಿ ತಬಲಾ ವಾದಕರಿಗೆ ಕೆಲಸ ಮಾಡಿದ್ದಾರೆ.
ಸಂಗೀತ ಕ್ಷೇತ್ರ ಅಷ್ಟೇ ಅಲ್ಲದೆ ರಂಗಭೂಮಿ ಕಲಾವಿದರಾಗಿಯೂ 1960 ರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಆಶಾಪುರದ ಶ್ರೀ ಸೂಗುರೇಶ್ವರ ಡ್ರಾಮಾ ಕಂಪನಿ, ದಾವಣಗೆರೆಯ ಗುಡಿಗೇರಿ ನಾಟಕಗಳಿಗೆ ತಬಲಾ ವಾದನದ ಮೂಲಕ ಸೇವೆ ನೀಡಿದ್ದಾರೆ. ಇವರ ಕಲಾ ಸೇವೆಯನ್ನು ಗುರುತಿಸಿ 1999ರಲ್ಲಿ ರಾಗರಂಗೋತ್ಸವ ಪ್ರಶಸ್ತಿ, 2000ರಲ್ಲಿ ಜನಪದ ಅಕಾಡೆಮಿ ಪ್ರಶಸ್ತಿ, 2001ರಲ್ಲಿ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ, 2014ರಲ್ಲಿ ಡಾ. ರಾಜ್‌ಕುಮಾರ್ ಜಿಲ್ಲಾ ಕನ್ನಡ ರತ್ನ ಪ್ರಶಸ್ತಿ ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಸಹ ಕಲಾ ಸೇವೆ ವಿವಿಧ ಹಲವು ಪ್ರಶಸ್ತಿ ಲಭಿಸಿದ್ದು, ಇದೀಗ 2024ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗರಿ ಮೂಡಿಗೇರಿಸಿಕೊಂಡಿದ್ದಾರೆ.
ಸಹಜ ಹೆರಿಗೆ ಮಾಡಿಸುವ ಮಲ್ಲಮ್ಮ:ಜಿಲ್ಲೆಯ ಕವಿತಾಳ ಪಟ್ಟಣದ ನಿವಾಸಿಯಾಗಿರುವ 74 ವರ್ಷದ ಸೂಲಗಿತ್ತಿ ಮಲ್ಲಮ್ಮನವರಿಗೆ ಸಮಾಜ ಸೇವೆ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ. ಕವಿತಾಳ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಹಜ ಹೆರಿಗೆ ಮಾಡಿಸುವ ಮೂಲಕ ಸೂಲಗಿತ್ತಿ ಮನೆ ಮಾತಗಿದ್ದಾರೆ.