ತುಮಕೂರು : ಜಿಲ್ಲೆಯ ವ್ಯಕ್ತಿಯೊಬ್ಬರು ವಿಡಿಯೋ ಕಾನ್ಫರೆನ್ಸ್ ಮೂಲಕ ವಂಚನೆಗೆ ಒಳಗಾಗಿ, ಬರೋಬ್ಬರಿ 19 ಲಕ್ಷ ರೂ. ಗಳನ್ನು ವ್ಯವಸ್ಥಿತವಾಗಿ ಕಳೆದುಕೊಂಡು ವಿಚಿತ್ರವಾಗಿ ಸೈಬರ್ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.
ನಗರದ ಉಪ್ಪಾರಹಳ್ಳಿಯ ಸರ್ಕಾರಿ ನೌಕರ ಬಿ. ಎಸ್. ನಾಗಭೂಷಣ್ ವಂಚನೆಗೆ ಒಳಗಾದವರು. ಹಣ ಕಳೆದುಕೊಂಡಿರುವ ಅವರು ತುಮಕೂರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ ?ಮುಂಬೈ ಕ್ರೈಂ ಬ್ರಾಂಚ್‌ನ ಸಿಬ್ಬಂದಿ ಎಂದು ವಂಚನೆಗೆ ಒಳಗಾಗಿರುವ ನಾಗಭೂಷಣ್ಗೆ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿದ್ದಾನೆ. ನಿಮ್ಮ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾನೆ.
ಆರೋಪಿಗಳ ಬಳಿ ಮತ್ತೊಂದು ಸಿಮ್ ಕಾರ್ಡ್ ಇದ್ದು, ಆ ಸಿಮ್ ಕಾರ್ಡ್ನ್ನು ಜನರಿಗೆ ಕಿರುಕುಳ ನೀಡಲು ಉಪಯೋಗಿಸಲಾಗುತ್ತಿದೆ. ನಿಮ್ಮ ಸಿಮ್ ಕಾರ್ಡ್ ಬಳಸಿ ಎರಡೂ ಪ್ರಕರಣಗಳಲ್ಲಿ ನಿಮ್ಮ ಆಸ್ತಿಯನ್ನು ವಶಪಡಿಸಿಕೊಳ್ಳಬಹುದು ಮತ್ತು ನಿಮ್ಮನ್ನೂ ಬಂಧಿಸುವ ಸಾಧ್ಯತೆಯಿದೆ ಎಂದು ಬೆದರಿಕೆಯೊಡ್ಡಿದ್ದಾನೆ.
ಇದರಿಂದ ಭಯಗೊಂಡ ನಾಗಭೂಷಣ್ಗೆ ಕೆಲ ಸಮಯದ ನಂತರ ಅನಾಮಿಕ ವ್ಯಕ್ತಿಯೊಬ್ಬರು ಪೊಲೀಸ್ ಸಮವಸ್ತ್ರ ಧರಿಸಿ ವಿಡಿಯೋ ಕರೆ ಮಾಡಿ ಇನ್ನಷ್ಟು ಭೀತಿಗೊಳಿಸಿದ್ದಾರೆ. ಈ ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ತಿಳಿಸಿದ್ದಾರೆ. ಅಲ್ಲದೆ ಮರುದಿನ ಬೆಳಗ್ಗೆ 8.30ಕ್ಕೆ ಪುನಃ ವಿಡಿಯೋ ಕಾನ್ಫರೆನ್ಸ್ ಕರೆ ಮಾಡಿ ಆರು ಗಂಟೆಗಳ ಕಾಲ ನಾಗಭೂಷಣ್ ಅವರನ್ನು ವಿಚಾರಣೆ ನಡೆಸಿದ್ದಾರೆ. ಅವರ ಬ್ಯಾಂಕ್ ಖಾತೆಗಳು ಮತ್ತು ಠೇವಣಿಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ.
ಅಲ್ಲದೆ ವಂಚಕರು ನಾಗಭೂಷಣ್ ಅವರ ಬ್ಯಾಂಕ್ ಖಾತೆಯಿಂದ ತನ್ನ ಖಾತೆಗೆ ಎಲ್ಲಾ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ತನಿಖೆ ಪೂರ್ಣಗೊಂಡ ನಂತರ ಸಂಪೂರ್ಣ ಮೊತ್ತವನ್ನು ಹಿಂತಿರುಗಿಸಲಾಗುವುದು ಎಂದು ವಿಡಿಯೋ ಕಾಲ್ ಕಟ್ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ :ಕಂಪನಿಯ ಲೋಗೋ, ಎಂಡಿ ಫೋಟೋ ಬಳಸಿ ₹56 ಲಕ್ಷ ಮೋಸ: ವಂಚನೆಯ ದುಡ್ಡಲ್ಲಿ ಔಡಿ ಕಾರು ಖರೀದಿ! 6 ಮಂದಿ ಅರೆಸ್ಟ್ - CHEATING CASE