ಕಡಬ/ದಕ್ಷಿಣ ಕನ್ನಡ:ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಇದೀಗ ಶಾಲಾ ಮಕ್ಕಳಲ್ಲಿ ಚಿಕನ್ಪಾಕ್ಸ್ ಆತಂಕ ಎದುರಾಗಿದೆ. ಜಿಲ್ಲೆಯ ಕಡಬ ಒಂದೇ ತಾಲೂಕಿನಲ್ಲಿ ವಿವಿಧ ಶಾಲೆಗಳಲ್ಲಿ 21ಕ್ಕೂ ಅಧಿಕ ಮಕ್ಕಳಿಗೆ ಚಿಕನ್ಪಾಕ್ಸ್ ಬಂದಿದೆ.
ಆರೋಗ್ಯ ಇಲಾಖೆಯಿಂದ ದೊರೆತ ಮಾಹಿತಿ ಅನ್ವಯ ನೆಲ್ಯಾಡಿಯಲ್ಲಿ ಎರಡು ಶಾಲೆಗಳಲ್ಲಿ ಒಟ್ಟು ಒಂಬತ್ತು ಮಕ್ಕಳಿಗೆ, ಬೆಳ್ಳಾರೆ ಶಾಲೆಯಲ್ಲಿ ಒಂದು, ಲಾವತ್ತಡ್ಕದಲ್ಲಿ ಒಂದು, ಗೋಳಿತ್ತೊಟ್ಟುವಿನಲ್ಲಿ ಒಂದು, ಕುಕ್ಕೆ ಸುಬ್ರಹ್ಮಣ್ಯದ ಶಾಲೆಯ 6 ಮಕ್ಕಳಿಗೆ ಸೇರಿದಂತೆ ಒಟ್ಟು 21 ಮಕ್ಕಳಿಗೆ ಚಿಕನ್ಪಾಕ್ಸ್ ಹರಡಿರುವ ಬಗ್ಗೆ ಪ್ರಸ್ತುತ ಮಾಹಿತಿ ಲಭ್ಯವಾಗಿದೆ. ರೋಗ ಹರಡಿರುವ ಶಾಲೆಗಳ ಆಡಳಿತ ಮಂಡಳಿಗೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸುವಂತೆ ಆದೇಶ ನೀಡಿದೆ. ರೋಗ ಕಡಿಮೆಯಾಗುವವರೆಗೂ ಮಕ್ಕಳಿಗೆ ರಜೆ ನೀಡುವಂತೆ ಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸದಂತೇ ಶಾಲೆಗಳಿಗೆ ಮತ್ತು ಪೋಷಕರಿಗೆ ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ವಿನಂತಿ ಮಾಡಿದ್ದಾರೆ.
ಚಿಕನ್ಪಾಕ್ಸ್ ಎಂದರೇನು? - ಇದರ ಲಕ್ಷಣಗಳು ಮತ್ತು ಕಾರಣಗಳು:ಚಿಕನ್ಪಾಕ್ಸ್ ಎಂಬುದು ವರಿಸೆಲ್ಲಾ- ಜೋಸ್ಟರ್ ವೈರಸ್‌ನಿಂದ ಉಂಟಾಗುವ ಸಣ್ಣ, ದ್ರವ ತುಂಬಿದ ಗುಳ್ಳೆಗಳೊಂದಿಗೆ ತುರಿಕೆ ಜೊತೆ ಆರಂಭವಾಗುವ ಸೋಂಕು. ಸಾಮಾನ್ಯವಾಗಿ, ಮಕ್ಕಳಿಗೆ ಸೇರಿದಂತೆ ವಯಸ್ಕರಿಗೂ ಸಹ ಇದು ಬರಬಹುದು. ಚಿಕನ್ಪಾಕ್ಸ್ನ ಚಿಹ್ನೆಯು ಜ್ವರ, ತುರಿಕೆಯೊಂದಿಗೆ ದೇಹದ ತುಂಬಾ ಕೆಂಪು ಗುಳ್ಳೆ ಉಂಟಾಗುತ್ತದೆ. ಕೆಲವು ದಿನಗಳ ನಂತರ, ಗುಳ್ಳೆಗಳು ಸಿಡಿಯುತ್ತವೆ.
ಚಿಕನ್ಪಾಕ್ಸ್ ಲಕ್ಷಣಗಳು ಸಾಮಾನ್ಯವಾಗಿ ವೈರಸ್‌ಗೆ ಒಡ್ಡಿಕೊಂಡ 10 ರಿಂದ 21 ದಿನಗಳ ಒಳಗೆ ಕಾಣಿಸಿಕೊಳ್ಳುತ್ತವೆ. ಮೊದಲ ಚಿಹ್ನೆ ಎಂದರೆ ಅನಾರೋಗ್ಯದ ಲಕ್ಷಣಗಳು ಗೋಚರಿಸುತ್ತದೆ. ಮೈ - ಕೈ ನೋವು, ಹೆಚ್ಚಿನ ತಾಪಮಾನದ ಜ್ವರ, ನಿರ್ಜಲೀಕರಣ, ತುಂಬಾ ದಣಿವು, ಆಯಾಸ ಉಂಟಾಗುತ್ತದೆ. ತುರಿಕೆ ಆರಂಭವಾಗಿ ಕಿರಿಕಿರಿ ಅನಿಸುತ್ತದೆ. ಹಲವರಿಗೆ ಹಸಿವಿನ ಕೊರತೆ, ತಲೆನೋವು ಉಂಟಾಗಿ ನಂತರದಲ್ಲಿ ದೇಹದಾದ್ಯಂತ ಕೆಂಪು ನೀರುಯುಕ್ತ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಇವು ಮೊದಲು ಸಾಮಾನ್ಯವಾಗಿ ಎದೆ, ಬೆನ್ನು ಅಥವಾ ಮುಖದ ಮೇಲೆ ಕಾಣಿಸಿಕೊಳ್ಳುತ್ತವೆ ಮತ್ತು ನಂತರ ಇಡೀ ದೇಹವನ್ನು ಆವರಿಸುತ್ತವೆ.