ಬೆಳಗಾವಿ:ರಾಜ್ಯದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಶುರುವಾಗಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಇನ್ನು ಈ ಚುನಾವಣಾ ಸಿದ್ಧತೆ ಹಾಗೂ ವಿವಿಧ ಹಂತದ ಪ್ರಕ್ರಿಯೆಗಳ ವೀಕ್ಷಣೆ ಮತ್ತು ಅಧ್ಯಯನಕ್ಕೆ ಐದು ದೇಶಗಳ ಚುನಾವಣಾ ಆಯೋಗಗಳ ಮುಖ್ಯಸ್ಥರು ಮತ್ತು ಅಧಿಕಾರಿಗಳು ಭೇಟಿ ನೀಡಿದ್ದು, ವಿಶೇಷವಾಗಿದೆ.
ಬೆಳಗಾವಿ ನಗರದ ವನಿತಾ ವಿದ್ಯಾಲಯದಲ್ಲಿ ಮಸ್ಟರಿಂಗ್ ಕಾರ್ಯ ಆರಂಭವಾಗಿದ್ದು, ಮತಗಟ್ಟೆಗಳತ್ತ ಇವಿಎಂ, ವಿವಿ ಪ್ಯಾಟ್ ಜೊತೆಗೆ ಸಿಬ್ಬಂದಿಗಳನ್ನು ಕಳುಹಿಸಲಾಗುತ್ತಿದೆ. ಇನ್ನು ಚುನಾವಣೆ ಪ್ರಕ್ರಿಯೆ ಅಧ್ಯಯನಕ್ಕೆ 28 ದೇಶಗಳ ಪ್ರತಿನಿಧಿಗಳು ಭಾರತ ದೇಶಕ್ಕೆ ಬಂದಿದ್ದು, ಅದರಲ್ಲಿ 5 ದೇಶಗಳ ಪ್ರತಿನಿಧಿಗಳ ತಂಡ ಬೆಳಗಾವಿಗೆ ಭೇಟಿ ನೀಡಿದೆ. ಕಾಂಬೋಡಿಯಾ, ಮೊಲ್ಡೊವಾ, ನೇಪಾಳ, ಸಿಶೆಲ್, ತುನಿಷಿಯಾ ಪ್ರತಿನಿಧಿಗಳು ಆಗಮಿಸಿದ್ದಾರೆ.
ಕಾಂಬೋಡಿಯಾ ದೇಶದ ರಾಷ್ಟ್ರೀಯ ಚುನಾವಣಾ ಮಂಡಳಿಯ ಸದಸ್ಯ ಹೆಲ್. ಸರಾಥ್, ಮುಖ್ಯ ಕಾರ್ಯದರ್ಶಿ ಹೌಟ್ ಬೋರಿನ್, ಮೊಲ್ಡೊವಾ ದೇಶದ ಕೇಂದ್ರ ಚುನಾವಣಾ ಆಯೋಗದ ಸದಸ್ಯೆ ಡಾನಾ ಮಂಟೇನು ಹಾಗೂ ಸ್ಥಳೀಯ ಜಿಲ್ಲಾ ಚುನಾವಣಾ ಪರಿಷತ್ ಮುಖ್ಯಸ್ಥ ಆ್ಯಡ್ರಿಯನ್ ಗಮರ್ತಾ ಎಸಾನು, ನೇಪಾಳ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ದಿನೇಶ್ ಕುಮಾರ್ ಥಾಪಾಲಿಯಾ ಹಾಗೂ ಅಧೀನ ಕಾರ್ಯದರ್ಶಿ ಥಾನೇಶ್ವರಬುಸಾಲ್, ಸಿಶೆಲ್ ದೇಶದ ಚುನಾವಣಾ ಆಯೋಗದ ಮುಖ್ಯಸ್ಥ ಡ್ಯಾನಿ ಸಿಲ್ವಾ ಲುಕಾಸ್ ಹಾಗೂ ಸಿಶೆಲ್ಸ್ ದೇಶದ ಚುನಾವಣಾ ಆಯುಕ್ತ ನೊರ್ಲಿಸ್ ನಿಕೋಲಸ್ ರೋಸ್ ಹೋರೌ, ತುನಿಷಿಯಾ ಎಲೆಕ್ಷನ್ ಹೈಕಮಿಷನ್(ಐಎಸ್ಐಇ) ನ ಮಾನಸ್ರೀ ಮೊಹ್ಮದ್ ತ್ಲಿಲಿ ಹಾಗೂ ಪ್ರಾದೇಶಿಕ ನಿರ್ದೇಶಕ ಜೆಲ್ಲಾಲಿ ನಬೀಲ್ ಆಗಮಿಸಿದ ಪ್ರತಿನಿಧಿಗಳಾಗಿದ್ದಾರೆ.