ನವದೆಹಲಿ: ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ನ (WPL) ಫೈನಲ್ ಪಂದ್ಯದಲ್ಲಿ ದೆಹಲಿ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಕಪ್ ಎತ್ತಿ ಹಿಡಿದಿರುವ ಆರ್ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ, ಚಹಲ್, ಸೆಹ್ವಾಗ್, ವಿಜಯ್ ಮಲ್ಯ ಸೇರಿದಂತೆ ಹಲವೆಡೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಆರ್ಸಿಬಿ ಫ್ರಾಂಚೈಸಿಯ ಮಾಜಿ ಮಾಲೀಕ ವಿಜಯ್ ಮಲ್ಯ ತಮ್ಮ ಎಕ್ಸ್ ಖಾತೆಯಲ್ಲಿ, 'ಡಬ್ಲೂಪಿಎಲ್ ಪ್ರಶಸ್ತಿ ಜಯಿಸಿದ ಮಹಿಳಾ ಆರ್ಸಿಬಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಪುರುಷರ ಆರ್ಸಿಬಿ ತಂಡ ಬಹಳ ವರ್ಷಗಳಿಂದ ಕಾಯುತ್ತಿರುವ ಟ್ರೋಫಿಯನ್ನು ಈ ಬಾರಿ ಗೆದ್ದರೆ ಈ ಖುಷಿ ಇಮ್ಮಡಿಗೊಳ್ಳಲಿದೆ. ಒಳ್ಳೆಯದಾಗಲಿ' ಎಂದು ಬರೆದಿದ್ದಾರೆ.
ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಮಹಿಳಾ ತಂಡದ ಆರ್ಸಿಬಿ ನಾಯಕಿ ಸ್ಮೃತಿ ಮಂಧಾನ ಅವರೊಂದಿಗೆ ವಿಡಿಯೋ ಕಾಲ್ನಲ್ಲಿ ಸಂವಾದ ನಡೆಸಿ, ತಂಡದ ಆಟಗಾರ್ತಿಯರನ್ನು 'ಸೂಪರ್ವುಮೆನ್' ಎಂದು ಕರೆದಿದ್ದಾರೆ.
ಸ್ಪಿನ್ನರ್ ಯಜುವೇಂದ್ರ ಚಹಲ್ ತಮ್ಮ ಎಕ್ಸ್ ಖಾತೆಯಲ್ಲಿ, 'ಆನಂದ ಪರಮಾನಂದ ಪರಮಾನಂದ' ಎಂದು ಮಂಜುನಾಥ ಚಿತ್ರದ ಹಾಡಿನ ತುಣಕನ್ನು ಕನ್ನಡದಲ್ಲಿಯೇ ಬರೆದು ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.