What Is Boxing Day Test: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್ ಗವಾಸ್ಕರ್ ಟ್ರೋಫಿ ಭಾಗವಾಗಿ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಈಗಾಗಲೇ 3 ಪಂದ್ಯಗಳು ಮುಗಿದಿವೆ. ಪರ್ತ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದರೆ, ಅಡಿಲೇಡ್ನ ಓವೆಲ್ ಮೈದಾನದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯಭೇರಿ ಬಾರಿಸಿತ್ತು. ಬಳಿಕ ಗಾಬಾ ಮೈದಾನದಲ್ಲಿ ನಡೆದ 3ನೇ ಪಂದ್ಯ ಮಳೆಗಾಹುತಿ ಆಗಿದೆ. ಇದೀಗ ಉಭಯ ತಂಡಗಳು ಡಿ.26ರಂದು ಮೆಲ್ಬೋರ್ನ್ ಮೈದಾನದಲ್ಲಿ 4ನೇ ಪಂದ್ಯ ಆಡಲಿವೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಪಂದ್ಯಕ್ಕೆ ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯಲಾಗುತ್ತಿದೆ. ಇಷ್ಟಕ್ಕೂ ಬಾಕ್ಸಿಂಗ್ ಡೇ ಎಂದರೇನು? ಪ್ರತಿ ವರ್ಷ ಡಿ.26ಕ್ಕೆ ನಡೆಯುವ ಟೆಸ್ಟ್ಗಳಿಗೆ ಬಾಕ್ಸಿಂಗ್ ಡೇ ಪಂದ್ಯ ಎಂದು ಏಕೆ ಕರೆಯಲಾಗುತ್ತದೆ?. ಇದರ ಇತಿಹಾಸವೇನು?, ಏಕೆ ಬಾಕ್ಸಿಂಗ್ ಡೇ ಆಚರಿಸಲಾಗುತ್ತದೆ? ಎಂಬುದರ ಕುರಿತು ಇಲ್ಲಿದೆ ಮಾಹಿತಿ.
ಬಾಕ್ಸಿಂಗ್ ಡೇ ಅಂದರೇನು?:ಪಾಶ್ಚಾತ್ಯ ಕ್ರಿಶ್ಚಿಯನ್ ಕ್ಯಾಲೆಂಡರ್ ಪ್ರಕಾರ, ಕ್ರಿಸ್ಮಸ್ ಹಬ್ಬದ ಮರುದಿನ ಅಂದರೆ ಡಿಸೆಂಬರ್ 26ರಂದು 'ಬಾಕ್ಸಿಂಗ್ ಡೇ' ಎಂದು ಆಚರಿಸಲಾಗುತ್ತದೆ. ಈ ದಿನದಂದು ಪ್ರತಿಯೊಬ್ಬರೂ ತಮ್ಮ ಸಂಬಂಧಿಕರು, ಸ್ನೇಹಿತರು ಮತ್ತು ಸೇವಕರಿಗೆ ಉಡುಗೊರೆ ಬಾಕ್ಸ್ಗಳನ್ನು (ಕ್ರಿಸ್ಮಸ್ ಬಾಕ್ಸ್) ನೀಡುತ್ತಾರೆ.
ಇದು ಆಹಾರ ಪದಾರ್ಥಗಳು, ನಗದು ಮತ್ತು ಇತರ ವಸ್ತುಗಳನ್ನು ಒಳಗೊಂಡಿರುತ್ತದೆ. ಅದರಲ್ಲೂ ಡಿಸೆಂಬರ್ 26ರಂದು ಉದ್ಯೋಗದಾತರಿಗೆಲ್ಲ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಲೆಂದು ರಜೆ ನೀಡಿ, ಅವರಿಗೆ ಉಡುಗೊರೆ ಬಾಕ್ಸ್ಗಳನ್ನು ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಆ ದಿನವನ್ನು 'ಬಾಕ್ಸಿಂಗ್ ಡೇ' ಎಂದು ಕರೆಯಲಾಗುತ್ತದೆ. ಇದನ್ನು ಆಸ್ಟ್ರೇಲಿಯಾ, ಯುಕೆ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಇತರ ಹಲವು ದೇಶಗಳು ಆಚರಿಸಲಾಗುತ್ತದೆ. ಹಾಗಾಗಿ ಈ ದಿನದಂದು ನಡೆಯುವ ಕ್ರಿಕೆಟ್ ಪಂದ್ಯಗಳನ್ನು ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತದೆ.
ಬಾಕ್ಸಿಂಗ್ ಡೇ ಟೆಸ್ಟ್ ಯಾವಾಗ ಪ್ರಾರಂಭವಾಯ್ತು?:1950ರಲ್ಲಿ, ಆಶಸ್ ಸರಣಿ ಭಾಗವಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಮೆಲ್ಬೋರ್ನ್ ಮೈದಾನದಲ್ಲಿ ಮೊದಲ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ನಡೆಯಿತು. ಅಂದಿನಿಂದ, ಆಸ್ಟ್ರೇಲಿಯಾವು ಪ್ರತಿ ವರ್ಷ ಬಾಕ್ಸಿಂಗ್ ಡೇ ಟೆಸ್ಟ್ ಅನ್ನು ಆಯೋಜಿಸುತ್ತದೆ. ಆದಾಗ್ಯೂ, 1984, 1988 ಮತ್ತು 1994 ರಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಅನ್ನು ಆಯೋಜಿಸಲು ಸಾಧ್ಯವಾಗಿರಲಿಲ್ಲ. ಕ್ರಿಸ್‌ಮಸ್‌ಗೂ ಮುನ್ನ ಆಸ್ಟ್ರೇಲಿಯಾ ಟೆಸ್ಟ್ ಪಂದ್ಯವನ್ನು ಆಯೋಜಿಸಿತ್ತು. ಆಸ್ಟ್ರೇಲಿಯಾ ಜೊತೆಗೆ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಕೂಡ ಪ್ರತಿ ವರ್ಷ ಬಾಕ್ಸಿಂಗ್ ಡೇ ಟೆಸ್ಟ್ ಆಡುತ್ತವೆ.
ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ದಾಖಲೆ?:1985ರಲ್ಲಿ, ಟೀಂ ಇಂಡಿಯಾ ತನ್ನ ಮೊದಲ ಬಾಕ್ಸಿಂಗ್ ಡೇ ಟೆಸ್ಟ್ ಅನ್ನು ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್‌ನಲ್ಲಿ ಆಡಿತು. ಈ ಪಂದ್ಯ ಡ್ರಾ ಆಗಿತ್ತು. ನಂತರ 1987ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಕೂಡ ಡ್ರಾದಲ್ಲಿ ಅಂತ್ಯಗೊಂಡಿತ್ತು. ಟೀಂ ಇಂಡಿಯಾ ಇದುವರೆಗೆ ವಿವಿಧ ದೇಶಗಳ ವಿರುದ್ಧ 22 ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ 4ರಲ್ಲಿ ಗೆದ್ದು 6 ಪಂದ್ಯ ಡ್ರಾ ಮಾಡಿಕೊಂಡಿತ್ತು. ಉಳಿದ 12 ಬಾರಿ ಸೋಲು ಕಂಡಿದೆ.
25 ವರ್ಷಗಳ ಬಳಿಕ ಭಾರತಕ್ಕೆ ಜಯ:ಬಾಕ್ಸಿಂಗ್ ಡೇ ಟೆಸ್ಟ್ ಗೆಲ್ಲಲು ಟೀಂ ಇಂಡಿಯಾ 25 ವರ್ಷ ಕಾಯಬೇಕಾಯಿತು. ಭಾರತ 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದುಕೊಂಡಿತು. ಅದೇ ಸಮಯದಲ್ಲಿ, ತಂಡ 2021 ಮತ್ತು 2024ರಲ್ಲಿ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ದ.ಆಫ್ರಿಕಾವನ್ನು ಸೋಲಿಸಿತು. ಇದಲ್ಲದೇ ಆಸ್ಟ್ರೇಲಿಯಾವನ್ನು ಎರಡು ಬಾರಿ ಸೋಲಿಸಿದೆ.
2018ರಲ್ಲಿ ಮೆಲ್ಬೋರ್ನ್‌ನಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ಭಾರತ 137 ರನ್‌ಗಳ ಜಯ ಸಾಧಿಸಿತ್ತು. ಅದರ ನಂತರ, 2020ರಲ್ಲಿ ಮೆಲ್ಬೋರ್ನ್‌ನಲ್ಲಿ 8 ವಿಕೆಟ್‌ಗಳಿಂದ ಪಂದ್ಯ ಗೆದ್ದುಕೊಂಡಿತು. ಇದೀಗ ಮತ್ತೊಮ್ಮೆ ಎರಡೂ ತಂಡಗಳು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಮುಖಾಮುಖಿಯಾಗಲಿವೆ.
ಇದನ್ನೂ ಓದಿ:ರೋಹಿತ್, ಕೊಹ್ಲಿ, ಅಶ್ವಿನ್ ಸೇರಿ 2024ರಲ್ಲಿ ಒಟ್ಟು 11 ಕ್ರಿಕೆಟಿಗರಿಂದ ನಿವೃತ್ತಿ ಘೋಷಣೆ