ನವದೆಹಲಿ: ಜೂನ್ 1 ರಿಂದ ಪುರುಷರ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಇದಕ್ಕಾಗಿ ಈಗಾಗಲೇ ಭಾರತ ಸೇರಿದಂತೆ ಬಹುತೇಕ ತಂಡಗಳು ಪ್ರಕಟಗೊಂಡಿವೆ. ಇದೀಗ ಈ ಪಟ್ಟಿಯಲ್ಲಿ ಪಪುವಾ ನ್ಯೂಗಿನಿಯಾ ಹೆಸರು ಸೇರ್ಪಡೆಗೊಂಡಿದೆ. ಪಪುವಾ ನ್ಯೂಗಿನಿಯಾ ಎರಡನೇ ಬಾರಿಗೆ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಸಜ್ಜಾಗಿದೆ. ಈ ಹಿಂದೆ 2021ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಿತ್ತು. ಈ ಬಾರಿ ಸಿ ಗುಂಪಿನಲ್ಲಿ ತಂಡ ಸ್ಥಾನ ಪಡೆದಿದೆ.
ಈ ಬಾರಿಯ ತಂಡವನ್ನು ಅಸಾದುಲ್ಲಾ ವಾಲಾ ನಾಯಕನಾಗಿ ಮುನ್ನಡೆಸಲಿದ್ದು, ಸಿಜೆ ಅಮಿನಿ ಅವರನ್ನು ತಂಡದ ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಸಾದುಲ್ಲಾ, ಈ ಬಾರಿ ತಂಡವು ಬಲಿಷ್ಟವಾಗಿದೆ. ಕಳೆದ ವಿಶ್ವಕಪ್ ನಲ್ಲಿ ಆಡಿರುವ ಅನುಭವಿ ಆಟಗಾರರು ತಂಡದಲ್ಲಿದ್ದು ಭರ್ಜರಿ ತರಬೇತಿ ನಡೆಸಿದ್ದಾರೆ. ಕೋವಿಡ್ನಿಂದಾಗಿ ಕಳೆದ ಟಿ20 ವಿಶ್ವಕಪ್‌ಗೆ ಗಮನಾರ್ಹ ತಯಾರಿ ನಡೆಸಲ ಸಾಧ್ಯವಾಗಿರಲಿಲ್ಲ. ವಿಶ್ವಕಪ್ ಆರಂಭಕ್ಕಾಗಿ ಎದುರು ನೋಡುತ್ತಿದ್ದು, ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
ಪಂದ್ಯಗಳು:ತಂಡವು 13 ಮೇ ರಂದು ಪೋರ್ಟ್ ಮೊರೆಸ್ಬಿಯಿಂದ ವೆಸ್ಟ್ ಇಂಡೀಸ್ಗೆ ಪ್ರಯಾಣ ಬೆಳೆಸಲಿದ್ದು, ಟ್ರಿನಿಡಾಡ್‌ನಲ್ಲಿ ನಡೆಯಲಿರುವ ಅಭ್ಯಾಸ ಪಂದ್ಯಗಳಲ್ಲಿ ಭಾಗಿಯಾಗಲಿದೆ. ನಂತರ ಜೂನ್ 2 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ತನ್ನ ಮೊದಲ ಪಂದ್ಯದಲ್ಲಿ 2 ಬಾರಿ ಚಾಂಪಿಯನ್ ವೆಸ್ಟ್ ಇಂಡೀಸ್ ಅನ್ನು ಜೂ.2ರಂದು ಎದುರಿಸಲಿದೆ, ನಂತರ ಜೂ.5ಕ್ಕೆ ಉಗಾಂಡ, ಜೂ.13ಕ್ಕೆ ಅಫ್ಘಾನಿಸ್ತಾನವನ್ನು ಎದುರಿಸಲಿದ್ದು, ನಂತರ ಗುಂಪು ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ.