ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಮೊದಲ ದಿನವೇ ಭಾರತೀಯ ಶೂಟರ್‌ಗಳು ನಿರಾಸೆ ಮೂಡಿಸಿದ್ದಾರೆ. ಪುರುಷರ 10 ಮೀಟರ್ ಏರ್ ಪಿಸ್ತೂಲ್ ಪಂದ್ಯದ ಅರ್ಹತಾ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಮತ್ತು ಅರ್ಜುನ್ ಚೀಮಾ ಫೈನಲ್ ಪ್ರವೇಶ ಪಡೆಯುವಲ್ಲಿ ಎಡವಿದ್ದಾರೆ. ಅಗ್ರ 8 ಶೂಟರ್‌ಗಳು ಅಂತಿಮ ಹಂತದ ಸ್ಫರ್ಧೆಗೆ ಪ್ರವೇಶ ಪಡೆದಿದ್ದಾರೆ.
ಈ ಪಂದ್ಯದಲ್ಲಿ ಸರಬ್ಜೋತ್ ಒಟ್ಟು 577 ಅಂಕಗಳೊಂದಿಗೆ ಒಂಭತ್ತನೇ ಸ್ಥಾನಗಳಿಸಿದರೇ, ಅರ್ಜುನ್ 574 ಅಂಕಗಳೊಂದಿಗೆ 18ನೇ ಸ್ಥಾನ ಪಡೆದರು. 4ನೇ ಸುತ್ತಿನಲ್ಲಿ ಸರಬ್ಜೋತ್ 100ಕ್ಕೆ 100 ಅಂಕಗಳನ್ನು ಗಳಿಸುವ ಮೂಲಕ 3ನೇ ಸ್ಥಾನಕ್ಕೇರಿದ್ದರು. ಈ ವೇಳೆ ಫೈನಲ್ ಪ್ರವೇಶಿಸುವುದು ಬಹುತೇಕ ಖಚಿತ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ನಂತರದ ಎರಡು ಸುತ್ತಗಳಲ್ಲಿ ಹಿನ್ನಡೆ ಅನುಭವಿಸಿ ಕೂಟದಿಂದ ಹೊರಬಿದ್ದರು.
ಮೊಲದ ಆರು ಸುತ್ತಿನಲ್ಲಿ 22 ವರ್ಷದ ಸರಬ್ಜೋತ್ ಸಿಂಗ್, ಕ್ರಮವಾಗಿ 94, 97, 96, 100, 93 ಮತ್ತು 97 (ಒಟ್ಟು 577) ಅಂಕಗಳನ್ನು ಕಲೆ ಹಾಕಿ ಜರ್ಮನಿ ಶೂಟರ್ ರಾಬಿನ್ ವಾಲ್ಟರ್ನೊಂದಿಗೆ ಸಮಬಲ ಸಾಧಿಸಿದ್ದರು. ನಂತರ ಸುತ್ತಿನಲ್ಲಿ ಕಳಪೆ ಪ್ರದರ್ಶನದಿಂದಾಗಿ 9ನೇ ಸ್ಥಾನಕ್ಕೆ ತಳ್ಳಲ್ಪಟ್ಟರು.
ಮತ್ತೊಂದೆಡೆ ಅರ್ಜುನ್ ಚೀಮಾ 574 ಅಂಕಗಳೊಂದಿಗೆ 18ನೇ ಸ್ಥಾನದಲ್ಲಿ ಈವೆಂಟ್ ಅನ್ನು ಪೂರ್ಣಗೊಳಿಸಿದರು. ಅರ್ಜುನ್ ಭವ್ಯವಾದ ಆರಂಭವನ್ನು ಮಾಡಿದರೂ, ಯಾವುದೇ ಸುತ್ತಿನಲ್ಲಿ ಪರಿಪೂರ್ಣ 100 ಅಂಕಗಳನ್ನು ಕಲೆ ಹಾಕಲು ಸಾಧ್ಯವಾಗಲಿಲ್ಲ. ಅದರಲ್ಲೂ ನಾಲ್ಕನೇ ಮತ್ತು ಐದನೇ ಸುತ್ತಿನಲ್ಲಿ ಕಳಪೆ ಪ್ರದರ್ಶನದಿಂದ ಫೈನಲ್ಗೇರುವಲ್ಲಿ ವಿಫಲರಾದರು.