ಬೆಂಗಳೂರು: ಇಂದಿನ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಆರ್ಸಿಬಿಯ ತವರು ಮೈದಾನವಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.
ಉಭಯ ತಂಡಗಳ ಪಾಲಿಗೆ ಇಂದಿನ ಪಂದ್ಯ ಮಹತ್ವದಾಗಿದ್ದು ಗೆದ್ದ ತಂಡದ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ. ಸೋತ ಟೀಮ್ ರೇಸ್ನಿಂದ ಹೊರ ಬೀಳಲಿದೆ. ಹಿಂದಿನ ನಾಲ್ಕು ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸುವ ಮೂಲಕ ಗೆಲುವಿನ ಟ್ರ್ಯಾಕ್ಗೆ ಮರುಳಿರುವ ಆರ್ಸಿಬಿ ಇಂದಿನ ಪಂದ್ಯವನ್ನು ಗೆದ್ದು ಪ್ಲೇಆಫ್ ಕನಸು ಜೀವಂತವಾಗಿರಿಸಿಕೊಳ್ಳುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿಯಲಿದೆ. ಆದರೆ ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಮಳೆರಾಯ ತನ್ನ ಇನ್ನಿಂಗ್ಸ್ ಆರಂಭಿಸಿದ್ದು, ಇಂದಿನ ಪಂದ್ಯಕ್ಕೂ ವರುಣ ಅಡ್ಡಿಪಡಿಸುತ್ತಾನಾ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ.
ಪಂದ್ಯ ರದ್ದಾದರೆ?:ಸದ್ಯ ಬೆಂಗಳೂರಿನಲ್ಲಿ ಮೋಡ ಕವಿದ ವಾರಾವರಣವಿದ್ದು, ಸಂಜೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಷ್ಟು ದಿನ ಮೆಳೆಗಾಗಿ ಪ್ರಾರ್ಥಿಸಿದ್ದ ಬೆಂಗಳೂರಿಗರು ಮಾತ್ರ ಇಂದು ಮಳೆ ಬಾರದಂತೆ ಪ್ರಾರ್ಥಿಸುತ್ತಿದ್ದಾರೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದಲ್ಲಿ ಎರಡೂ ತಂಡಗಳೂ ತಲಾ ಒಂದು ಅಂಕ ಪಡೆಯಲಿದ್ದು, ಆರ್ಸಿಬಿ ಪ್ಲೇಆಫ್ನಿಂದ ಹೊರ ಬೀಳಲಿದೆ. ಡೆಲ್ಲಿ ಪ್ಲೇಆಫ್ ಮೇಲಿನ ತಂಡಗಳ ಸೋಲಿನ ಮೇಲೆ ನಿರ್ಧಾರವಾಗಲಿದೆ.
ಸದ್ಯ ಆರ್ಸಿಬಿ ಆಡಿರುವ 12 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 10 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಡೆಲ್ಲಿ 12 ಪಂದ್ಯ ಆಡಿ 6ರಲ್ಲಿ ಗೆದ್ದು 12 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ.
ಹೆಡ್ ಟು ಹೆಡ್:ಉಭಯ ತಂಡಗಳು ಇದೂವರೆಗೂ 30 ಬಾರಿ ಮುಖಾಮುಖಿಯಾಗಿದ್ದು, ಡೆಲ್ಲಿ ವಿರುದ್ದ ಆರ್ಸಿಬಿ 18 ಬಾರಿ ಗೆದ್ದು ಮೇಲುಗೈ ಸಾಧಿಸಿದೆ. ಅದರಂತೆ ಡೆಲ್ಲಿ 11 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ರದ್ದಾಗಿದೆ.