ಬೆಂಗಳೂರು:ವಿಶ್ವದಲ್ಲೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಫ್ರಾಂಚೈಸಿಯಾಗಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ) ತನ್ನ ಐಪಿಎಲ್ ಅಭಿಯಾನದಲ್ಲಿ ಇಂದು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಸತತ 4 ಸೋಲುಗಳಿಂದ ಕಂಗೆಟ್ಟಿರುವ ತಂಡ ಪ್ಲೇ ಆಫ್ಗೆ ಏರಬೇಕಾದರೆ, ಈ ಮ್ಯಾಚ್ ಗೆಲ್ಲಲೇಬೇಕಿದೆ. ಹೈದರಾಬಾದ್ ಗೆಲುವಿನ ಹಾದಿಯಲ್ಲಿ ಮುಂದುವರಿಯಲು ಹೋರಾಡಲಿದೆ.
ಈ ಸಲ ಕಪ್ ಗೆಲ್ಲುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದ ಆರ್‌ಸಿಬಿ ಸತತ ಸೋಲು ಕಂಡು ಭಾರಿ ನಿರಾಸೆ ಮೂಡಿಸಿದೆ. ಬ್ಯಾಟರ್ಗಳ ವೈಫಲ್ಯ, ಬೌಲಿಂಗ್ ಪಡೆಯ ಅಶಕ್ತತೆ ತಂಡವನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ. ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಹೊರತುಪಡಿಸಿ ತಂಡದಲ್ಲಿ ಯಾವೊಬ್ಬ ಬ್ಯಾಟರ್ ಕೂಡ ತನ್ನ ಸಾಮರ್ಥ್ಯ ತೋರ್ಪಡಿಸಿಲ್ಲ. ನಾಯಕ ಡು ಪ್ಲೆಸಿಸ್ ಕಳೆದ ಪಂದ್ಯದಲ್ಲಿ ಮಿಂಚಿದ್ದಾರೆ. ಮಧ್ಯಮ ಕ್ರಮಾಂಕದ ಹೊಣೆ ಹೊರಬೇಕಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಕ್ರಿಕೆಟನ್ನೇ ಮರೆತಂತಿದೆ. ರಜತ್ ಪಾಟೀದಾರ್, ದಿನೇಶ್ ಕಾರ್ತಿಕ್ ಹಾಗೊಮ್ಮೆ ಹೀಗೊಮ್ಮೆ ತಂಡಕ್ಕೆ ರನ್ ತಂದಿದ್ದಾರೆ.
ಬೌಲಿಂಗ್ ಪಡೆಯಲ್ಲಿಲ್ಲ ಮೊನಚು:ತಂಡದ ಪ್ರಮುಖ ದೌರ್ಬಲ್ಯ ಎಂದರೆ ಅದು ಬೌಲಿಂಗ್ ವಿಭಾಗ. ತಂಡ ಎಷ್ಟೇ ದೊಡ್ಡ ಮೊತ್ತ ಗಳಿಸಿದರೂ, ಅದನ್ನು ಉಳಿಸಿಕೊಳ್ಳುವ ಶಕ್ತಿ ಬೌಲರ್ಗಳಿಗಿಲ್ಲ. ಮೊಹಮದ್ ಸಿರಾಜ್, ಮಯಾಂಕ್ ದಾಗರ್, ಯಶ್ ದಯಾಳ್, ರೀಸ್ ಟೋಪ್ಲಿ ವಿಕೆಟ್ ಪಡೆಯಲು ಇನ್ನಿಲ್ಲದಂತೆ ಒದ್ದಾಡುತ್ತಿದ್ದಾರೆ.
ಆರ್‌ಸಿಬಿ ಇದುವರೆಗೆ 6 ಪಂದ್ಯಗಳನ್ನು ಆಡಿದ್ದು, 1 ರಲ್ಲಿ ಮಾತ್ರ ಗೆದ್ದಿದೆ. ಇದರಿಂದಾಗಿ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಸನ್‌ರೈಸರ್ಸ್ ಹೈದರಾಬಾದ್ 5 ಪಂದ್ಯಗಳಲ್ಲಿ ಆಡಿದ್ದು, 3 ಗೆದ್ದು 2 ರಲ್ಲಿ ಸೋತಿದೆ. ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಉಭಯ ತಂಡಗಳು ಇದುವರೆಗೂ 23 ಪಂದ್ಯಗಳಲ್ಲಿ ಎದುರಾಗಿದ್ದು, ಆರ್‌ಸಿಬಿ 10 ರಲ್ಲಿ ಗೆದ್ದಿದೆ. ಹೈದರಾಬಾದ್ 12ರಲ್ಲಿ ವಿಜಯ ಸಾಧಿಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಕಳೆದ 5 ಪಂದ್ಯಗಳಲ್ಲಿ ಆರ್‌ಸಿಬಿ ಮೇಲುಗೈ ಸಾಧಿಸಿದ್ದು, 3 ಬಾರಿ ಹೈದರಾಬಾದ್ ತಂಡವನ್ನು ಸೋಲಿಸಿದೆ. ಸನ್‌ರೈಸರ್ಸ್ 2 ಸಲ ಗೆದ್ದಿದೆ.