RCB New Captain Announced: ಮುಂದಿನ ತಿಂಗಳಿನಿಂದ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪ್ರಾರಂಭವಾಗಲಿದೆ. ಇದಕ್ಕೂ ಮುನ್ನವೆ RCB ಹೊಸ ಜೆರ್ಸಿ, ವೆಬ್ಸೈಟ್ ಜೊತೆಗೆ ನೂತನ ಕ್ಯಾಪ್ಟನ್ ಘೋಷಣೆ ಮಾಡಿದೆ.
ಕಳೆದ 17 ಆವೃತ್ತಿಗಳಲ್ಲಿ ಮೂರು ಬಾರಿ (2009, 2011, 2016) ಫೈನಲ್ ಪ್ರವೇಶಿಸಿದ್ದರೂ ಆರ್ಸಿಬಿಗೆ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಹೊಸ ತಂಡದೊಂದಿಗೆ ಅಖಾಡಕ್ಕಿಳಿಯಲು ಸಿದ್ಧವಾಗಿರುವ ಬೆಂಗಳೂರು ಶತಾಯಗತ ಕಪ್ ಗೆಲ್ಲಲೇಬೇಕು ಎಂದು ಪಣತೊಟ್ಟಿದೆ. ಇದೇ ಉದ್ದೇಶದಿಂದಾಗಿ ಕಳೆದ ವರ್ಷ ಡಿಸೆಂಬರ್ ಕೊನೆಯಲ್ಲಿ ಜೆಡ್ಡಾದಲ್ಲಿ ನಡೆದಿದ್ದ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಆರ್ಸಿಬಿ ಅಳೆದು ತೂಗಿ ಬಲಿಷ್ಠ ಸೈನ್ಯವನ್ನು ಕಟ್ಟಿದೆ.
ಈ ಬಾರಿ ವಿರಾಟ್ ಕೊಹ್ಲಿ, ರಜತ್ ಪಟಿದಾರ್, ಯಶ ದಯಾಳ್ ಹರತು ಪಡಿಸಿ ಹಳಬರನ್ನೆಲ್ಲ ಕೈಬಿಟ್ಟಿರುವ ಬೆಂಗಳೂರು ಫ್ರಾಂಚೈಸಿ ಹೊಸ ಪ್ರತಿಭೆಗಳಿಗೆ ಮಣೆ ಹಾಕಿ, ಅದೃಷ್ಟದ ಪರೀಕ್ಷೆಗಿಳಿದಿದೆ. ಈ ಬಾರಿ ಟಿ-20ಯಲ್ಲಿ ಸ್ಫೋಟಕ ಪ್ರದರ್ಶನದೊಂದಿಗೆ ಮಿಂಚುವಂತಹ ಬಲಿಷ್ಠ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಅದರಲ್ಲೂ ಭುವನೇಶ್ವರ್ ಕುಮಾರ್, ಫಿಲ್ ಸಾಲ್ಟ್, ಜೇಕಬ್ ಬೆಥೆಲ್, ಟಿಮ್ ಡೇವಿಡ್ ಲಿವಿಂಗ್‌ಸ್ಟೋನ್ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಇಡಲಾಗಿದೆ. ಈ ಆಟಗಾರರು ಸಿಡಿದೆದ್ದರೇ ಈ ಸಲ ಕಪ್ ಆರ್ಸಿಬಿಯದ್ದಾಗಲಿದೆ.
ನೂತನ ನಾಯಕ ಯಾರು?:ಈ ಬಾರಿ ಬಲಿಷ್ಠ ತಂಡವನ್ನು ಕಟ್ಟಿರುವ ಆರ್ಸಿಬಿಗೆ ಯಾರು ನಾಯಕನಾಗಲಿದ್ದಾರೆ ಎಂಬ ಬಗ್ಗೆ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗಳು ನಡೆದಿದ್ದವು. ಅಭಿಮಾನಿಗಳು ಕಾಯುವಿಕೆ ಇಂದು ಕೊನೆಗೊಂಡಿದೆ. ಆರ್ಸಿಬಿಯ ನೂತ ನಾಯಕನಾಗಿ ರಜತ್ ಪಾಟಿದಾರ್ ಆಯ್ಕೆ ಆಗಿದ್ದಾರೆ.