ಜೈಪುರ:ಈ ಬಾರಿಯ ಐಪಿಎಲ್ನಲ್ಲಿ ಬಲಾಢ್ಯ ತಂಡವಾಗಿ ಮುನ್ನುಗ್ಗುತ್ತಿರುವ ರಾಜಸ್ಥಾನ ರಾಯಲ್ಸ್ 7ನೇ ಗೆಲುವು ದಾಖಲಿಸಿತು. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 9 ವಿಕೆಟ್ಗಳ ಸೋಲು ಕಂಡಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದು ಪ್ಲೇಆಫ್ಗೆ ಇನ್ನಷ್ಟು ಸನಿಹವಾಯಿತು.
ವಿಶೇಷವೆಂದರೆ, ಒಂದು ತಂಡವಾಗಿ ಆಡುವುದು ಎಂದರೆ ಏನೆಂಬುದನ್ನು ರಾಯಲ್ಸ್ ತೋರಿಸಿಕೊಟ್ಟಿತು. ಮೊದಲು ಬ್ಯಾಟ್ ಮಾಡಿ ಮುಂಬೈ ಅನ್ನು ಸಂದೀಪ್ ಶರ್ಮಾ ತಮ್ಮ ಬೌಲಿಂಗ್ ಪರಾಕ್ರಮದಿಂದ ಕಟ್ಟಿ ಹಾಕಿದರೆ, ಬಳಿಕ ಯಶಸ್ವಿ ಜೈಸ್ವಾಲ್ ತಮ್ಮ ಬ್ಯಾಟಿಂಗ್ ಖದರ್ ಏನೆಂಬುದನ್ನು ಸಾಬೀತು ಮಾಡಿದರು. ಉಳಿದವರಿಂದಲೂ ಉತ್ತಮ ಪ್ರದರ್ಶನ ಕಂಡುಬಂದಿತು.
ಮುಂಬೈ 'ಪಂಚ'ರ್ ಮಾಡಿದ ಸಂದೀಪ್:ಪ್ಲೇಆಫ್ ರೇಸ್ನಲ್ಲಿ ಉಳಿದುಕೊಳ್ಳಲು ಗೆಲ್ಲಲೇಬೇಕಿದ್ದ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಭಾರೀ ಮೊತ್ತ ದಾಖಲಿಸಿ ಗೆಲುವಿನ ಕನಸು ಕಂಡಿದ್ದ ತಂಡಕ್ಕೆ ಸಂದೀಪ್ ಶರ್ಮಾ ಮರ್ಮಾಘಾತ ನೀಡಿದರು. ತಮ್ಮ ಕೋಟಾದ 4 ಓವರ್ಗಳಲ್ಲಿ ಐದು ವಿಕೆಟ್ಗಳ ಗೊಂಚಲು ಕಿತ್ತಿದರು. ಟ್ರೆಂಟ್ ಬೌಲ್ಟ್ಗೆ ರೋಹಿತ್ ಶರ್ಮಾ (6) ಔಟಾದ ಬಳಿಕ ಇಶಾನ್ ಕಿಶನ್ ಅವರನ್ನು (0) ಪೆವಿಲಿಯನ್ಗೆ ಅಟ್ಟಿದರು. ಬೆನ್ನಲ್ಲೇ, ಮಾರಕ ಬ್ಯಾಟರ್ ಸೂರ್ಯಕುಮಾರ್ ಯಾದವ್ಗೆ (10) ನೆಲೆಯೂರಲು ಬಿಡಲಿಲ್ಲ. 23 ರನ್ ಗಳಿಸಿ ಆಡುತ್ತಿದ್ದ ಮೊಹಮದ್ ನಬಿಗೆ ಚಹಲ್ ಚಳ್ಳೆಹಣ್ಣು ತಿನ್ನಿಸಿದರು.