ಪ್ಯಾರಿಸ್(ಫ್ರಾನ್ಸ್): ಭಾರತದ ಪುರುಷರ ಹಾಕಿ ತಂಡ 2024ರ ಪ್ಯಾರಿಸ್ ಒಲಿಂಪಿಕ್ಸ್ ಸೆಮಿಫೈನಲ್‌ನಲ್ಲಿ ಇಂದು ಸಾಂಪ್ರದಾಯಿಕ ಎದುರಾಳಿ ಜರ್ಮನಿಯನ್ನು ಎದುರಿಸಲಿದೆ. 44 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸುವತ್ತ ಭಾರತ ಕಣ್ಣು ನೆಟ್ಟಿದೆ. ಇದಕ್ಕಾಗಿ ಜರ್ಮನಿ ವಿರುದ್ಧ ಜಯಿಸಲೇಬೇಕಿದೆ.
ಕ್ವಾರ್ಟರ್ ಫೈನಲ್ ಪಂದ್ಯದ ಶೂಟೌಟ್‌ನಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು 4-2 ಗೋಲುಗಳಿಂದ ಸೋಲಿಸುವ ಮೂಲಕ ಭಾರತ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಜರ್ಮನಿ ಭಾನುವಾರ ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜೆಂಟೀನಾವನ್ನು 3-2 ಅಂತರದಿಂದ ಸೋಲಿಸಿ ಸೆಮಿಫೈನಲ್‌ಗೆ ಎಂಟ್ರಿ ಪಡೆದಿದೆ.
ಭಾರತ vs ಜರ್ಮನಿ ಹಿಂದಿನ ಪಂದ್ಯಗಳು:ಹಾಕಿ ಇತಿಹಾಸದಲ್ಲಿ ಇಲ್ಲಿಯವರೆಗೆ ಭಾರತ ಮತ್ತು ಜರ್ಮನಿ ನಡುವೆ ಒಟ್ಟು 35 ಪಂದ್ಯಗಳು ನಡೆದಿವೆ. ಇದರಲ್ಲಿ ಜರ್ಮನಿ ಮೇಲುಗೈ ಸಾಧಿಸಿದೆ. ಜರ್ಮನಿ ಒಟ್ಟು 16 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಭಾರತ 12 ಪಂದ್ಯಗಳನ್ನು ಗೆದ್ದಿದೆ. ಉಭಯ ತಂಡಗಳ ನಡುವೆ ನಡೆದ 7 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.
2020ರ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಪ್ಲೇಆಫ್‌ನಲ್ಲಿ ಜರ್ಮನಿಯನ್ನು ಸೋಲಿಸುವ ಮೂಲಕ ಕಂಚಿನ ಪದಕ ಜಯಿಸಿತ್ತು. ರೋಚಕ ಪಂದ್ಯದಲ್ಲಿ ಭಾರತ 5-4 ಅಂತರದಲ್ಲಿ ಗೆಲುವಿನ ಕೇಕೆ ಹಾಕಿತ್ತು. ಅಂದಿನಿಂದ ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ ಇತ್ತಂಡಗಳ ನಡುವೆ ಒಟ್ಟು 6 ಪಂದ್ಯಗಳು ನಡೆದಿದ್ದು, ಈ ಪೈಕಿ 5 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ. ಈ ವರ್ಷ ಜೂನ್‌ನಲ್ಲಿ ಜರ್ಮನಿ ಒಂದೇ ಒಂದು ಪಂದ್ಯ ಗೆದ್ದಿದೆ. ಹಾಗಾಗಿ, ಇಂದಿನ ಪಂದ್ಯದಲ್ಲಿ ಭಾರತ ಹಾಟ್ ಫೆವರಿಟ್ ಎನಿಸಿದೆ.
ಭಾರತ ಕೊನೆಯ ಚಿನ್ನದ ಪದಕ ಗೆದ್ದಿದ್ದು ಯಾವಾಗ?: ಭಾರತ ಕೊನೆಯದಾಗಿ 1980ರಲ್ಲಿ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿತ್ತು. ಇದೀಗ 44 ವರ್ಷಗಳ ಬಳಿಕ ಚಿನ್ನದ ಬರ ನೀಗಿಸುವ ಅವಕಾಶ ಸಿಕ್ಕಿದೆ. ಒಂದು ವೇಳೆ ಸೆಮಿಫೈನಲ್‌ನಲ್ಲಿ ಭಾರತ ಗೆದ್ದದ್ದೇ ಆದಲ್ಲಿ ಬೆಳ್ಳಿ ಪದಕ ಖಚಿತ.
ಪ್ಯಾರಿಸ್ ಒಲಿಂಪಿಕ್ಸ್ ಹಾಕಿ ಸ್ಪರ್ಧೆಯಲ್ಲಿ ನಾಲ್ಕು ತಂಡಗಳು ಸೆಮಿಫೈನಲ್ ತಲುಪಿವೆ. ಇದರಲ್ಲಿ ಭಾರತ, ಜರ್ಮನಿ, ನೆದರ್ಲ್ಯಾಂಡ್ಸ್ ಮತ್ತು ಸ್ಪೇನ್ ಸೇರಿವೆ. ಎರಡೂ ಸೆಮಿಫೈನಲ್ ಪಂದ್ಯಗಳು ಇಂದೇ ನಡೆಯಲಿವೆ.
ಇದನ್ನೂ ಓದಿ:ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಕಮಾಲ್: 89.34 ಮೀ ಜಾವೆಲಿನ್ ಎಸೆದು ಫೈನಲ್ ಪ್ರವೇಶ! - Neeraj Chopra