ನವದೆಹಲಿ:ಪಾಕಿಸ್ತಾನ ಕ್ರಿಕೆಟ್ನಲ್ಲಿ ಎಲ್ಲವೂ ಸರಿಯಿಲ್ಲ. ಬುಧವಾರವಷ್ಟೆ ಆಯ್ಕೆ ಸಮಿತಿಯನ್ನು ಬರ್ಖಾಸ್ತು ಮಾಡಲಾಗಿತ್ತು. ಇದರ ಬೆನ್ನಲ್ಲೇ ಒಬ್ಬರ ಮೇಲೆ ಇನ್ನೊಬ್ಬರು ಆಪಾದನೆ ಮಾಡುತ್ತಿದ್ದಾರೆ. ಏಕದಿನ ಮತ್ತು ಟಿ-20 ತಂಡದ ನಾಯಕತ್ವದಿಂದ ದಿಢೀರ್ ತೆಗೆದು ಹಾಕಲ್ಪಟ್ಟಿರುವ ವೇಗಿ ಶಾಹೀನ್ ಶಾ ಆಫ್ರಿದಿ ಟಿ-20 ವಿಶ್ವಕಪ್ ವೇಳೆ ಕೋಚ್ಗಳ ಜೊತೆ ಕಿತ್ತಾಡಿಕೊಂಡಿದ್ದರು ಎಂಬ ಅಂಶ- ಬೆಳಕಿಗೆ ಬಂದಿದೆ.
ಟಿ-20 ವಿಶ್ವಕಪ್ ವೇಳೆ ಪಾಕ್ನ ಪ್ರಮುಖ ವೇಗಿಯಾಗಿರುವ ಶಾಹೀನ್ ತರಬೇತುದಾರರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ತಂಡದ ಕೋಚ್‌ಗಳು ಮತ್ತು ಮ್ಯಾನೇಜ್‌ಮೆಂಟ್ ಸಿಬ್ಬಂದಿ ಜೊತೆ ಅಫ್ರಿದಿ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಆದರೂ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದಕ್ಕೆ ಕಾರಣ ಏನೆಂಬ ಬಗ್ಗೆ ಈಗ ತನಿಖೆ ನಡೆಯುತ್ತಿದೆ ವರದಿಯಲ್ಲಿ ಹೇಳಲಾಗಿದೆ.
ಭಾರತ ಮತ್ತು ಅಮೆರಿಕದ ವಿರುದ್ಧ ಸೋತು ಲೀಗ್ ಹಂತದಲ್ಲೇ ತಂಡ ಹೊರಬಿದ್ದಿದ್ದಕ್ಕೆ ಶಾಹೀನ್ ತೀವ್ರ ಅಸಮಾಧಾನಗೊಂಡಿದ್ದರು. ಹೀಗಾಗಿ ಅವರ ತಂಡದ ಸಿಬ್ಬಂದಿ ಜೊತೆ ಬೈದಾಡಿಕೊಂಡಿದ್ದಾರೆ. ಶಾಹೀನ್ ಅಲ್ಲದೇ, ಹ್ಯಾರೀಸ್ ರೌಫ್ ಪಂದ್ಯಗಳ ಸೋಲಿನ ಬಳಿಕ ಅಭಿಮಾನಿಯೊಬ್ಬರ ಮೇಲೆ ದೈಹಿಕ ಹಲ್ಲೆಗೆ ಮುಂದಾಗಿದ್ದರು. ರಕ್ಷಣಾ ಸಿಬ್ಬಂದಿ ಅವರನ್ನು ತಡೆದಿದ್ದರು. ಆಟಗಾರರು ತಂಗಿದ್ದ ಹೋಟೆಲ್ ಹೊರಗೆ ಈ ಘಟನೆ ನಡೆದಿತ್ತು.
ಪಾಕ್ ಆಯ್ಕೆ ಸಮಿತಿ ವಜಾ:ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯು ತನ್ನ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಬುಧವಾರ ವಜಾ ಮಾಡಿದೆ. ಸಮಿತಿಯಲ್ಲಿದ್ದ ವಹಾಬ್ ರಿಯಾಜ್ ಮತ್ತು ಅಬ್ದುಲ್ ರಜಾಕ್ರನ್ನು ಮಂಡಳಿಯು ಹುದ್ದೆಯಿಂದ ಕಿತ್ತೆಸೆದಿದೆ. ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿ ಇನ್ನು ಮುಂದೆ ನಿಮ್ಮ ಸೇವೆ ಅಗತ್ಯವಿಲ್ಲ ಎಂದು ರಜಾಕ್ ಮತ್ತು ರಿಯಾಜ್ ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸೂಚಿಸಿದೆ. ಅಬ್ದುಲ್ ರಜಾಕ್ ಪುರುಷ ಮತ್ತು ಮಹಿಳಾ ಆಯ್ಕೆ ಸಮಿತಿಯ ಭಾಗವಾಗಿದ್ದರೆ, ವಹಾಬ್ ಪುರುಷರ ತಂಡದ ಆಯ್ಕೆಗಾರರಾಗಿದ್ದರು.
ಈ ಬಗ್ಗೆ ವಹಾಬ್ ರಿಯಾಜ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ತಂಡದ, ಮತ್ತಿತರರ ಬಗ್ಗೆ ಹೇಳಲು ಬಹಳಷ್ಟಿದೆ. ಆದರೆ, ಆಪಾದನೆಗಳಲ್ಲೇ ಕಾಲ ಕಳೆಯಲು ಇಷ್ಟವಿಲ್ಲ. ನಾನು ಆಯ್ಕೆ ಸಮಿತಿಯ ಸದಸ್ಯನಾಗಿ ದೇಶಕ್ಕಾಗಿ ಸೇವೆ ಸಲ್ಲಿಸಿರುವೆ. ನಾನು ಇಷ್ಟಪಡುವ ಆಟದಲ್ಲಿ ಜನರು ನನ್ನನ್ನು ಸೇವಕ ಎಂದು ಅರಿತರೆ ಸಾಕು. ನಂಬಿಕೆ ಮತ್ತು ಪ್ರಾಮಾಣಿಕತೆಯಿಂದ ಪಾಕಿಸ್ತಾನ ಕ್ರಿಕೆಟ್‌ನ ಉನ್ನತಿಗಾಗಿ ನನ್ನೆಲ್ಲ ಶ್ರಮ ಹಾಕಿ ಕೆಲಸ ಮಾಡಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.
ತಂಡದ ಮುಖ್ಯ ಕೋಚ್ ಗ್ಯಾರಿ ಕರ್ಸ್ಟನ್ ಮತ್ತು ಇತರ ಕೋಚ್ಗಳಿಗೆ ಪ್ರತಿ ಆಟಗಾರರು ಬೆಂಬಲ, ಗೌರವ ನೀಡಬೇಕು ಎಂದು ಶಾಹೀನ್ ಆಫ್ರಿದಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ಇದನ್ನೂ ಓದಿ:'ಟೆಸ್ಟ್‌ನಲ್ಲಿ 400 ರನ್ ಗಳಿಸುವ ಸಾಮರ್ಥ್ಯ ಇವರಿಬ್ಬರಲ್ಲಿದೆ': ರೋಹಿತ್, ವಿರಾಟ್ ಅಲ್ಲ! - Brian Lara