ಕರಾಚಿ (ಪಾಕಿಸ್ತಾನ):ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನಕ್ಕೆ ಮೊಟ್ಟಮೊದಲ ಬಾರಿಗೆ ವೈಯಕ್ತಿಕ ಚಿನ್ನದ ಪದಕ ಗೆದ್ದು ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಸಾಧನೆ ಮಾಡಿರುವ ಹಿನ್ನೆಲೆ ಕರಾಚಿ ನಿವಾಸಿಗಳು ಸಂಭ್ರಮಾಚರಣೆ ಮಾಡಿದರು.
27ರ ಹರೆಯದ ನದೀಮ್ ಅವರು ಪ್ಯಾರಿಸ್ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ 92.97 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿ ಒಲಿಂಪಿಕ್ನ ನೂತನ ದಾಖಲೆ ನಿರ್ಮಿಸಿದರು. ಪಾಕಿಸ್ತಾನದ ಕೊನೆಯ ಚಿನ್ನದ ಪದಕವು 1984ರ ಲಾಸ್ ಏಂಜಲೀಸ್ ಕ್ರೀಡಾಕೂಟದಲ್ಲಿ ಹಾಕಿ ತಂಡದಿಂದ ಬಂದಿತ್ತು. ಕರಾಚಿಯ ಅನೇಕ ಭಾಗಗಳಲ್ಲಿ ಸಂಭ್ರಮಾಚರಣೆಗಳು ಮುಗಿಲು ಮುಟ್ಟಿವೆ.
ಯುವಕರು ರಸ್ತೆಗಳಲ್ಲಿ ತಮ್ಮ ಕಾರಿನ ಹಾರ್ನ್ಗಳನ್ನು ಬಾರಿಸುತ್ತಾ, ಪಾಕಿಸ್ತಾನದ ಧ್ವಜ ಹಾಗೂ ನದೀಮ್ ಫಲಕಗಳನ್ನು ಪ್ರದರ್ಶಿಸುವ ಮೂಲಕ ಸಂಭ್ರಮಿಸಿದರು. ಪಂಜಾಬ್‌ನ ಖಾನೇವಾಲ್‌ನ ಗ್ರಾಮೀಣ ಪ್ರದೇಶದಿಂದ ಬಂದ ನದೀಮ್ ಅವರು, 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಮತ್ತು ಕಳೆದ ವರ್ಷದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಹಾಗೂ ಈ ಒಲಿಂಪಿಕ್ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ನದೀಮ್ ಚಿನ್ನ ಗೆಲ್ಲುವ ಮೂಲಕ ಭಾರತದ ನೀರಜ್ ಚೋಪ್ರಾ ಅವರನ್ನು ಒಲಿಂಪಿಕ್ ಚಾಂಪಿಯನ್ ಪಟ್ಟದಿಂದ ಕೆಳಗಿಳಿಸಿರುವುದು ಖಚಿತವಾದ ತಕ್ಷಣವೇ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಚೋಪ್ರಾ 89.45 ಮೀ. ದೂರ ಎಸೆದು ಬೆಳ್ಳಿ ಪದಕ ಪಡೆದುಕೊಂಡರು.
ಕರಾಚಿಯ ಮೇಯರ್ ಮುರ್ತಾಜಾ ವಹಾಬ್ ಅವರು ತಕ್ಷಣವೇ ಸಿಂಧ್ ಸರ್ಕಾರದಿಂದ ನದೀಮ್ಗೆ 5 ಕೋಟಿ ನಗದು ಬಹುಮಾನವನ್ನು ಘೋಷಿಸಲಾಗಿದೆ. ಅರ್ಷದ್ ಮನೆಗೆ ಹಿಂದಿರುಗಿದ ನಂತರ ನಾವು ಕರಾಚಿಯಲ್ಲಿ ಅವರಿಗೆ ಸಂಭ್ರಮದ ಸ್ವಾಗತ ಕಾರ್ಯಕ್ರಮ ಆಯೋಜಿಸುತ್ತೇವೆ. ಅವರು ಮನೆಗೆ ಹಿಂದಿರುಗಿದ ಸಮಯದಲ್ಲಿ ದೊಡ್ಡ ಸಂಭ್ರಮಾಚರಣೆ ಮಾಡುತ್ತೇವೆ. ಅವರು ನಮಗಷ್ಟೇ ಹೆಮ್ಮೆ ತಂದಿಲ್ಲ. ಆದರೆ, ಅವರು ಪಾಕಿಸ್ತಾನವನ್ನು ವಿಶ್ವ ಮಟ್ಟದಲ್ಲಿ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಮೇಯರ್ ವಹಾಬ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
'ಅರ್ಷದ್ ಸಾಧನೆ ಎಲ್ಲಾ ಯುವಕರಿಗೆ ದೊಡ್ಡ ಮಾದರಿ':''ನದೀಮ್ ಮೊಣಕೈ ಮತ್ತು ಮೊಣಕಾಲು ಗಾಯಗಳೊಂದಿಗೆ ಹೋರಾಡಿದ ನಂತರ, ಮತ್ತು ಅವರಿಗೆ ಲಭ್ಯವಿರುವ ಸೀಮಿತ ತರಬೇತಿ ಸೌಲಭ್ಯಗಳೊಂದಿಗೆ ಪ್ಯಾರಿಸ್ಗೆ ಹೋದರು. ಒಂದು ಹಂತದಲ್ಲಿ ತನ್ನ ಹಳೆಯ ಜಾವಲಿನ್ ಸವೆದು ಹೋಗಿದ್ದರಿಂದ ಹೊಸ ಜಾವಲಿನ್ ಕೊಡಿಸುವಂತೆ ಸರ್ಕಾರಕ್ಕೆ ಮನವಿ ಕೂಡ ಮಾಡಿಕೊಂಡಿದ್ದರು. ಇಂದು ಅರ್ಷದ್ ಟ್ರ್ಯಾಕ್ ಅಂಡ್ ಫೀಲ್ಡ್‌ನಲ್ಲಿ ಮಾಡಿದ ಸಾಧನೆ ಎಲ್ಲಾ ಯುವಕರಿಗೆ ದೊಡ್ಡ ಮಾದರಿಯಾಗಿದೆ ಎಂದು ನಾನು ಭಾವಿಸುತ್ತೇನೆ. ಯುವಕರು ಕ್ರಿಕೆಟ್ ಮಾತ್ರವಲ್ಲದೇ ಇತರ ಕ್ರೀಡೆಗಳಲ್ಲಿಯೂ ಆಸಕ್ತಿ ವಹಿಸುವುದನ್ನು ನೀವು ನೋಡುತ್ತೀರಿ'' ಎಂದು ಮಾಜಿ ಟೆಸ್ಟ್ ನಾಯಕ ರಶೀದ್ ಲತೀಫ್ ಹೇಳಿದ್ದಾರೆ.
ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಪಾಕಿಸ್ತಾನದ ಹಾಕಿ ತಂಡದ ಸದಸ್ಯ ಅಯಾಜ್ ಮಹಮೂದ್, ನಾನು ನೋಡಿದ್ದನ್ನು ನಂಬಲು ಸಾಧ್ಯವಿಲ್ಲ. ನಮ್ಮ ಹಾಕಿ ತಂಡವು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿರುವ ಸಮಯದಲ್ಲಿ, ಅರ್ಷದ್ ಪಾಕಿಸ್ತಾನದ ಧ್ವಜವನ್ನು ಎತ್ತರಕ್ಕೆ ಹಾರಿಸಿದ್ದಾರೆ'' ಎಂದು ಹೇಳಿದರು.
ಇದನ್ನೂ ಓದಿ:ಜಾವಲಿನ್ ಥ್ರೋನಲ್ಲಿ ಚಿನ್ನ ಮಿಸ್ ಮಾಡಿಕೊಂಡ ನೀರಜ್ ಚೋಪ್ರಾಗೆ ಬೆಳ್ಳಿಯ ತೋರಣ: ಕೂಟ ದಾಖಲೆ ಮಾಡಿದ ಪಾಕ್ನ ನದೀಮ್ಗೆ ಬಂಗಾರ - Neeraj Chopra wins silver