ಕರ್ನಾಟಕ

karnataka

ETV Bharat / sports

'ಇದು ನನ್ನ ಕೊನೆಯ ಟಿ20 ವಿಶ್ವಕಪ್​': ಕಿವೀಸ್​ ಹಿರಿಯ ವೇಗಿ ಟ್ರೆಂಟ್​ ಬೌಲ್ಟ್​ ಘೋಷಣೆ - Trent Boult - TRENT BOULT

ಟಿ20 ವಿಶ್ವಕಪ್​ನಲ್ಲಿ ಕಳಪೆ ಆಟದಿಂದ ನ್ಯೂಜಿಲ್ಯಾಂಡ್​ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ಹಿರಿಯ ವೇಗಿ ಟ್ರೆಂಟ್​ ಬೌಲ್ಟ್​ ವಿಶ್ವಕಪ್​ ಪಂದ್ಯಾವಳಿಗೆ ವಿದಾಯ ಘೋಷಿಸಿದ್ದಾರೆ.

ಕಿವೀಸ್​ ಹಿರಿಯ ವೇಗಿ ಟ್ರೆಂಟ್​ ಬೌಲ್ಟ್​
ಕಿವೀಸ್​ ಹಿರಿಯ ವೇಗಿ ಟ್ರೆಂಟ್​ ಬೌಲ್ಟ್​ (ETV Bharat)

By PTI

Published : Jun 15, 2024, 4:20 PM IST

ಟ್ರಿನಿಡಾಡ್ (ವೆಸ್ಟ್ ಇಂಡೀಸ್​​):ಅಮೆರಿಕ ಮತ್ತು ವೆಸ್ಟ್​ಇಂಡೀಸ್ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲಿ ಪ್ರಬಲ ತಂಡಗಳು ಹೊರಬಿದ್ದಿವೆ. ಇದರಲ್ಲಿ ನ್ಯೂಜಿಲ್ಯಾಂಡ್​ ಕೂಡ ಒಂದು. 2021 ರ ರನ್ನರ್​ ಅಪ್​ ತಂಡ ಲೀಗ್​ ಹಂತದಲ್ಲೇ ಹೊರಬಿದ್ದಿರುವುದು ಟೀಕೆಗಳಿಗೆ ಆಹಾರವಾಗಿದೆ. ಡಬಲ್​ ಶಾಕ್​ ಎಂಬಂತೆ ಹಿರಿಯ ವೇಗಿ ಟ್ರೆಂಟ್​ ಬೌಲ್ಟ್​ ಟಿ20 ವಿಶ್ವಕಪ್​ಗೆ ವಿದಾಯ ಹೇಳಿದ್ದಾರೆ.

ಅನುಭವಿ ವೇಗಿ ಟ್ರೆಂಟ್ ಬೌಲ್ಟ್ ಅವರು, ಇನ್ನು ಮುಂದೆ ತಾವು ಟಿ20 ವಿಶ್ವಕಪ್​ನಲ್ಲಿ ಆಡುವುದಿಲ್ಲ ಎಂದು ಹೇಳಿದ್ದಾರೆ. ಉಗಾಂಡ ವಿರುದ್ಧ 9 ವಿಕೆಟ್​​ ಭರ್ಜರಿ ಗೆಲುವಿನ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಇದು ನನ್ನ ಕೊನೆಯ ಟಿ20 ವಿಶ್ವಕಪ್ ಆಗಿದೆ. ಇನ್ನು ಮುಂದೆ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ" ಎಂದು ಹೇಳಿದರು.

ದೇಶಕ್ಕಾಗಿ ಆಡುವುದು ಹೆಮ್ಮೆ:ಟೂರ್ನಿಯಲ್ಲಿ ತಂಡದ ಪ್ರದರ್ಶನ ಉತ್ತಮವಾಗಿಲ್ಲ. ಸೂಪರ್​ 8 ಹಂತಕ್ಕೂ ತಲುಪಲು ಸಾಧ್ಯವಾಗದೇ ಇರುವುದು ನೋವಿನ ಸಂಗತಿ. ಆದರೆ, ದೇಶಕ್ಕಾಗಿ ಆಡುವುದು ಹೆಮ್ಮೆಯ ಸಂಗತಿಯಾಗಿದೆ. ವಿಶ್ವಕಪ್​ ಟೂರ್ನಿಯಲ್ಲಿ ತಂಡ ಉತ್ತಮ ದಾಖಲೆ ಹೊಂದಿದೆ. ಈ ಸಲ ಅದೃಷ್ಟ ಕೈಕೊಟ್ಟಿದೆ ಎಂದು ಬೌಲ್ಟ್​ ಹೇಳಿದರು.

ತಂಡದಲ್ಲಿ ಅದ್ಭುತ ಪ್ರತಿಭೆಗಳಿದ್ದರೂ, ಉತ್ತಮ ಪ್ರದರ್ಶನ ಬರದೇ ಇರುವುದು ದುರದೃಷ್ಟಕರ. ಶ್ರೇಯಾಂಕ ಪಟ್ಟಿಯಲ್ಲಿ ಮೇಲಿದ್ದರೂ ತಂಡ ಎಡವಿದೆ. ಆದರೆ, ದೇಶಕ್ಕಾಗಿ ಆಡುವುದುನ್ನು ಮುಂದುವರಿಸುತ್ತೇವೆ. ತಂಡ ಮುಂದೆ ಉತ್ತಮ ಪ್ರದರ್ಶನ ನೀಡಲಿದೆ ಎಂದು ಭಾವಿಸುವೆ ಎಂದು ಹಿರಿಯ ವೇಗಿ ಅಭಿಪ್ರಾಯಪಟ್ಟಿದ್ದಾರೆ.

2011 ರಲ್ಲಿ ಟಿ20 ಮಾದರಿಗೆ ಪಾದಾರ್ಪಣೆ ಮಾಡಿದ ಟ್ರೆಂಟ್​ ಬೌಲ್ಟ್​, 2014 ರಿಂದ ನಾಲ್ಕು ವಿಶ್ವಕಪ್​ಗಳಲ್ಲಿ ಸ್ಥಾನ ಪಡೆದಿದ್ದಾರೆ. ಈವರೆಗೆ 60 ಪಂದ್ಯಗಳನ್ನು ಆಡಿದ್ದು, 81 ವಿಕೆಟ್​ ಕಬಳಿಸಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸುತ್ತಾರಾ ಇಲ್ಲವೇ ಎಂಬುದು ಇನ್ನೂ ದೃಢಪಟ್ಟಿಲ್ಲ.

ಮೊದಲ ಸಲ ಲೀಗ್​ನಲ್ಲೇ ಔಟ್​:ನ್ಯೂಜಿಲ್ಯಾಂಡ್​ ತಂಡ 2014 ರಿಂದ ಸತತವಾಗಿ ಸೆಮಿಫೈನಲ್​ ತಲುಪಿತ್ತು. 2021 ರಲ್ಲಿ ಫೈನಲ್​ ಕೂಡ ತಲುಪಿ ಸೋತು ರನ್ನರ್​ ಅಪ್​ ಪ್ರಶಸ್ತಿ ಪಡೆದಿತ್ತು. 2024 ರ ಟೂರ್ನಿಯಲ್ಲಿ ಲೀಗ್​ ಹಂತದಲ್ಲೇ ಸೋಲು ಕಂಡು ಹೊರಬಿದ್ದಿದೆ. ಸಿ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಕಿವೀಸ್​ ಪಡೆ ಆಡಿದ ಮೂರು ಪಂದ್ಯಗಳಲ್ಲಿ ಅಫ್ಘಾನಿಸ್ತಾನ, ವೆಸ್ಟ್​ ಇಂಡೀಸ್​ ವಿರುದ್ಧ ಸೋತಿದೆ. ಉಗಾಂಡಾ ವಿರುದ್ಧ ಗೆದ್ದು 2 ಅಂಕ ಕಲೆಹಾಕಿದೆ. ಉಳಿದ ಪಪುವಾ ನ್ಯೂಗಿನಿಯಾ ವಿರುದ್ಧ ಗೆದ್ದರೂ, ಸೂಪರ್​-8 ಹಂತಕ್ಕೆ ತಲುಪಲು ಸಾಧ್ಯವಿಲ್ಲ.

ಇದನ್ನೂ ಓದಿ:ಐರ್ಲೆಂಡ್ ವಿರುದ್ಧದ ಪಂದ್ಯ ಮಳೆಗಾಹುತಿ; ಸೂಪರ್​ - 8ಕ್ಕೆ ಅಮೆರಿಕ ಲಗ್ಗೆ, ಪಾಕಿಸ್ತಾನ ಹೊರಕ್ಕೆ - Pakistan knocked Out T20 WC

ABOUT THE AUTHOR

...view details