ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಒಂದು ಪಂದ್ಯ ಬಾಕಿ ಇರುವಂತೆಯೇ ಕಳೆದುಕೊಂಡಿದೆ. ಸತತ ಎರಡು ಪಂದ್ಯಗಳನ್ನು ಸೋಲುವ ಮೂಲಕ ರೋಹಿತ್ ತಂಡ ತವರಿನಲ್ಲಿ ಸರಣಿ ಸೋತಿದೆ.
ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 46 ರನ್ಗಳಿಗೆ ಸರ್ವಪತನ ಕಂಡಿತು. ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ ಚೇತರಿಸಿಕೊಂಡರೂ 462 ರನ್ ಪೇರಿಸಿ ಕಿವೀಸ್ಗೆ ಕೇವಲ 107 ರನ್ಗಳ ಗುರಿ ನೀಡಿತು. ಈ ಪಂದ್ಯವನ್ನೂ ನ್ಯೂಜಿಲೆಂಡ್ 8 ವಿಕೆಟ್ಗಳಿಂದ ಜಯಿಸಿತು.
ನಂತರ ಪುಣೆ ಟೆಸ್ಟ್ ಭಾರತ ಗೆಲ್ಲಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ ಇಲ್ಲೂ ನಿರೀಕ್ಷೆಗಳು ಹುಸಿಯಾದವು. ಮೊದಲ ಪಂದ್ಯದಂತೆಯೇ ಎರಡನೇ ಟೆಸ್ಟ್ನಲ್ಲೂ ಕಳಪೆ ಪ್ರದರ್ಶನ ತೋರಿದ ಭಾರತ 113 ರನ್ಗಳಿಂದ ಹೀನಾಯ ಸೋಲುಂಡಿತು. ತವರಿನಲ್ಲಿ ಸ್ಪಿನ್ ಬಲೆ ಬೀಸಿ ಎದುರಾಳಿಗಳನ್ನು ಕಾಡುತ್ತಿದ್ದ ಭಾರತ, ಈ ಬಾರಿ ಅದೇ ಅಸ್ತ್ರದಲ್ಲಿ ತಾನೇ ಸಿಲುಕಿತು.
ಮತ್ತೊಂದೆಡೆ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದ ಕಿವೀಸ್ 67 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಸರಣಿ ಗೆದ್ದಿದೆ. ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ನಾಯಕ ಟಾಮ್ ಲ್ಯಾಥಮ್ ತಂಡವನ್ನು ಉತ್ತಮವಾಗಿ ಮುನ್ನಡೆಸಿದರು.
ಎರಡನೇ ಪಂದ್ಯದ ಬಳಿಕ ತಂಡದ ಯಶಸ್ಸಿನ ಬಗ್ಗೆ ಮಾತನಾಡಿರುವ ನಾಯಕ ಟಾಮ್ ಲ್ಯಾಥಮ್ ಭಾರತವನ್ನು ಸೋಲಿಸಲು ನಾವು ದೊಡ್ಡ ಯೋಜನೆ ರೂಪಿಸಿದ್ದು, ಅದು ಯಶಸ್ವಿಯಾಯಿತು ಎಂದರು. "ಎರಡು ಟೆಸ್ಟ್ ಪಂದ್ಯಗಳಲ್ಲಿನ ಟಾಸ್ ನಿರ್ಧಾರ ತಮ್ಮ ಪರವಾಗಿತ್ತು. ಹಾಗಾಗಿ ಐತಿಹಾಸಿಕ ಸರಣಿ ಗೆಲುವಿಗೆ ಇದೂ ಕೂಡ ಪ್ರಮುಖ ಕಾರಣ. ಇದಲ್ಲದೆ, ನಾವು ಭಾರತದಲ್ಲಿ ಪ್ರಾಬಲ್ಯ ಸಾಧಿಸುವ ಶೈಲಿಯನ್ನು ಅಳವಡಿಸಿಕೊಂಡಿದ್ದೇವೆ. ಆರಂಭದಲ್ಲಿಯೇ ಅವರ ಆಟಕ್ಕೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದ್ದೇವೆ. ಸರಣಿ ಆರಂಭಕ್ಕೂ ಮೊದಲೇ ನಾವು ಭಾರತಕ್ಕೆ ಕಠಿಣ ಸವಾಲೊಡ್ಡಲು ಬಯಸಿದ್ದೆವು, ಅದರಂತೆ ಯಶಸ್ವಿಯಾಗಿದ್ದೇವೆ. ಮೊದಲ ಪಂದ್ಯದಲ್ಲೇ ಪ್ರಾಬಲ್ಯ ಸಾಧಿಸಬೇಕು ಎಂದುಕೊಂಡಿದ್ದೆವು ಅದೂ ಕೂಡ ಸಕ್ಸಸ್ ಆಗಿದೆ. ಇದೆಲ್ಲಕ್ಕೂ ಮಿಗಿಲಾಗಿ ಸಮಯೋಚಿತ ಬ್ಯಾಟಿಂಗ್‌ನೊಂದಿಗೆ ಸ್ಕೋರ್ ಮೇಲೆ ಗಮನ ಹರಿಸಬೇಕೆಂದು ಮೊದಲಿಗೆ ಪ್ಲಾನ್ ಮಾಡಿದ್ದೇವು. ಅಂದುಕೊಂಡಂತೆ ಬ್ಯಾಟಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದೇವೆ. ನಮ್ಮ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಅವರ ಆಟದ ಶೈಲಿ ನೋಡಿ ಖುಷಿಯಾಗಿದೆ" ಎಂದರು.
"ಸ್ಯಾಂಟ್ನರ್ ಚೆನ್ನೈ ಸೂಪರ್ ಕಿಂಗ್ಸ್ ಪರ ಹೆಚ್ಚು ಕಾಲದಿಂದ ಆಡುತ್ತಿರುವ ಕಾರಣ ಭಾರತದ ಪಿಚ್ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ. ಬಹಳ ಸಮಯದಿಂದ ನಮ್ಮ ತಂಡದ ಭಾಗವಾಗಿರುವ ಅವರು ಉಪಯುಕ್ತ ಬೌಲರ್ ಎಂದು ನಮಗೆ ತಿಳಿದಿದೆ" ಎಂದು ಅವರು ತಿಳಿಸಿದರು.
ಇದನ್ನೂ ಓದಿ:ಕೇವಲ 10 ಎಸೆತಗಳಲ್ಲಿ ಮುಗಿದ 5 ದಿನದ ಟೆಸ್ಟ್ ಮ್ಯಾಚ್: ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಅವಧಿಯ ಪಂದ್ಯವಿದು!