ಕ್ರೈಸ್ಟ್‌ಚರ್ಚ್ (ನ್ಯೂಜಿಲ್ಯಾಂಡ್ ): ಹ್ಯಾಗ್ಲಿ ಓವಲ್ ಮೈದಾನದಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವೆ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಮಣಿಸಿದೆ. ಈ ಗೆಲುವಿನೊಂದಿಗೆ ನ್ಯೂಜಿಲ್ಯಾಂಡ್ 5 ಪಂದ್ಯಗಳ ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮೊನಚು ಕಳೆದುಕೊಂಡ ಪಾಕ್, ಕಳಪೆ ಪ್ರದರ್ಶನದ ಆಟದಿಂದ ದಂಡ ತೆತ್ತಿದೆ. ನ್ಯೂಜಿಲ್ಯಾಂಡ್ ಇದುವರೆಗೆ ಆಡಿದ ನಾಲ್ಕೂ ಟಿ20 ಪಂದ್ಯಗಳಲ್ಲಿ ಏಕಪಕ್ಷೀಯ ಜಯ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 158ರನ್ ಕಲೆಹಾಕಿತ್ತು. ಇದಕ್ಕೆ ಉತ್ತರವಾಗಿ ನ್ಯೂಜಿಲ್ಯಾಂಡ್ ತಂಡ 18.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲುವಿನ ದಡ ಸೇರಿತು. ಆರಂಭಿಕ ಆಘಾತ ಎದುರಿಸಿದ ಕಿವೀಸ್, 2.4 ಓವರ್‌ಗಳಲ್ಲಿ 20 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಆದರೆ, ಇದರ ನಂತರ ಡೇರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಅಜೇಯ ಅರ್ಧಶತಕಗಳನ್ನು ಸಿಡಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. 44 ಎಸೆತಗಳನ್ನು ಎದುರಿಸಿದ ಡೇರಿಲ್ ಮಿಚೆಲ್ 7 ಬೌಂಡರಿ ಮತ್ತು 2 ಸಿಕ್ಸ್ ಸಹಿತ 72 ರನ್ ಗಳಿಸಿದರೆ, ಗ್ಲೆನ್ ಫಿಲಿಪ್ಸ್ ಕೂಡ 52 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 3 ಸಿಕ್ಸ್ ನೆರವಿನಿಂದ 70 ರನ್ ಗಳಿಸಿದರು. ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಜೋಡಿಯು 4ನೇ ವಿಕೆಟ್ಗೆ ಅಜೇಯ 139 ರನ್‌ಗಳ ಜೊತೆಯಾಟ ತಂಡಕ್ಕೆ ಗೆಲುವು ನೀಡಿತು. ಗೆಲುವಿನ ದಡ ಸೇರಿಸಿದ ಮಿಚೆಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಪಾಕ್ ಪರ ವೇಗಿ ಶಾಹೀನ್ ಅಫ್ರಿದಿ 3 ವಿಕೆಟ್ ಪಡೆದರು.