ನವದಹಲಿ: ಐಪಿಎಲ್ ಆರಂಭಕ್ಕೂ ಮುನ್ನವೇ ಗುಜರಾತ್ ಟೈಟಾನ್ಸ್ (GT) ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಪ್ರಮುಖ ಬೌಲರ್ ವೇಗಿ ಮೊಹ್ಮದ ಶಮಿ ಈ ಬಾರಿಯ IPL ನಿಂದ ಹೊರ ಬಿದ್ದಿದ್ದಾರೆ. ಎಡ ಪಾದದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ 33 ವರ್ಷದ ಶಮಿ ಚಿಕಿತ್ಸೆಗಾಗಿ ಇಂಗ್ಲೆಂಡ್ಗೆ ತೆರಳಲಿದ್ದಾರೆ. ಹಾಗಾಗಿ ಈಬಾರಿಯ ಐಪಿಎಲ್ನಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ.
ಕೊನೆಯದಾಗಿ ಶಮಿ ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡದ ಭಾಗವಾಗಿ ಆಡಿದ್ದರು. ಅದಾದ ಬಳಿಕ ಯಾವುದೇ ಪಂದ್ಯಗಳನ್ನು ಆಡಿರಲಿಲ್ಲ. ನಂತರ ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಬಹುದು ಎಂದು ನಿರೀಕ್ಷಿಸಲಾಗಿತ್ತು ಆದರೆ ಗಾಯದ ಸಮಸ್ಯೆಯಿಂದ ಈ ಸರಣಿಯಿಂದಲೂ ಅವರು ಹೊರಗುಳಿದಿದ್ದಾರೆ.
ಜನವರಿ ಕೊನೆಯ ವಾರದಲ್ಲಿ ಶಮಿ ಎಡ ಪಾದದ ಚಿಕಿತ್ಸೆಗಾಗಿ ಲಂಡನ್‌ಗೆ ತರೆಳಿ ವಿಶೇಷ ಚುಚ್ಚುಮದ್ದನ್ನು ಪಡೆದಿದ್ದರು. ಆದರೆ ಅದರಿಂದ ಯಾವುದೇ ಪ್ರಯೋಜನವಾಗದ ಕಾರಣ ಇದೀಗ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿದೆ.
ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್: ಶಮಿ ಗುಜರಾತ್‌ನ ಪ್ರಮುಖ ವೇಗದ ಬೌಲರ್ ಆಗಿದ್ದಾರೆ. ಎರಡು ಋತುಗಳಲ್ಲಿ ಗುಜರಾತ್ ತಂಡದ ಯಶಸ್ಸಿಗೆ ಶಮಿ ಗಣನೀಯ ಕೊಡುಗೆ ನೀಡಿದ್ದಾರೆ. 2022ರ IPL ನಲ್ಲಿ 20 ವಿಕೆಟ್‌ಗಳನ್ನು ಉರುಳಿಸಿದ್ದ ಶಮಿ ಕಳೆದ ಋತುವಿನಲ್ಲಿ ಅಂದರೆ IPL 2023ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದರು. ಅವರು 17 ಪಂದ್ಯಗಳಲ್ಲಿ 18.61 ರ ಅತ್ಯುತ್ತಮ ಸರಾಸರಿಯಲ್ಲಿ 28 ವಿಕೆಟ್‌ಗಳನ್ನು ಪಡೆದಿದ್ದರು. ಅಲ್ಲದೆ ಈ ಅವಧಿಯಲ್ಲಿ ಎರಡು ಬಾರಿ ನಾಲ್ಕು ವಿಕೆಟ್ಗಳನ್ನೂ ಪಡೆದಿದ್ದರು.
2022ರ ಮೆಗಾ ಹರಾಜಿನಲ್ಲಿ 6.25 ಕೋಟಿ ರೂ.ಗೆ ಶಮಿಯನ್ನು ಗುಜರಾತ್ ಟೈಟಾನ್ಸ್ ಖರೀದಿಸಿತ್ತು. ಈ ಹಿಂದೆ ಶಮಿ ಪಂಜಾಬ್ ಕಿಂಗ್ಸ್‌ನ ಭಾಗವಾಗಿದ್ದರು. ಶಮಿ ಇಲ್ಲಿಯವರೆಗೆ ಒಟ್ಟು 110 ಐಪಿಎಲ್ ಪಂದ್ಯಗಳನ್ನು ಆಡಿ 26.86 ಸರಾಸರಿಯಲ್ಲಿ 127 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಎಕಾನಮಿ 8.44 ಆಗಿದೆ.
2023ರ ODI ವಿಶ್ವಕಪ್‌ನಲ್ಲೂ ಭರ್ಜರಿ ಪ್ರದರ್ಶನ:ಕಳೆದ ವರ್ಷಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ (World Cup)ನಲ್ಲೂ ಶಮಿ ಅದ್ಭುತ ಪ್ರದರ್ಶನ ತೋರಿದ್ದರು. ಈ ಟೂರ್ನಿಯ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ವಿಶ್ವಕಪ್‌ನಲ್ಲಿ ಕೇವಲ 7 ಪಂದ್ಯಗಳನ್ನು ಆಡಿದರು, ಇದರಲ್ಲಿ ಅವರು 10.71 ರ ಅತ್ಯುತ್ತಮ ಸರಾಸರಿಯಲ್ಲಿ 24 ವಿಕೆಟ್‌ಗಳನ್ನು ಪಡೆದಿದ್ದರು. ಟೂರ್ನಿಯ ಮೊದಲ ನಾಲ್ಕು ಪಂದ್ಯಗಳಿಂದ ಶಮಿ ಹೊರಗುಳಿದಿದ್ದರು.
ಇದನ್ನೂ ಓದಿ:ರಣಜಿಯಲ್ಲಿ ಆಡದಿರಲು ಬೆನ್ನುನೋವಿನ ಕಾರಣ ನೀಡಿದರಾ ಶ್ರೇಯಸ್ ಅಯ್ಯರ್; ಎನ್ಸಿಎ ಹೇಳೋದೇನು?