ಕರ್ನಾಟಕ

karnataka

ETV Bharat / sports

ಪದಾರ್ಪಣೆ ಪಂದ್ಯದಲ್ಲೇ ಹೊಸ ದಾಖಲೆ ಬರೆದ ವೇಗಿ ಮಯಾಂಕ್ ಯಾದವ್ - Mayank Yadav Record - MAYANK YADAV RECORD

ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಹಣಾಹಣಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಯುವ ಬೌಲರ್​​ ಮಯಾಂಕ್ ಯಾದವ್ ಚೊಚ್ಚಲ ಪಂದ್ಯದಲ್ಲೇ ವೇಗದ ಮೂಲಕ ಅಲೆ ಎಬ್ಬಿಸಿದರು.

MAYANK YADAV RECORD
ಮಯಾಂಕ್ ಯಾದವ್ (IANS)

By ANI

Published : Oct 7, 2024, 9:04 AM IST

ಗ್ವಾಲಿಯರ್ (ಮಧ್ಯಪ್ರದೇಶ): ಗ್ವಾಲಿಯರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾನುವಾರ ನಡೆದ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್​ಗಳ ಅಮೋಘ ಜಯ ದಾಖಲಿಸಿತು. ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಯುವ ವೇಗಿ ಮಯಾಂಕ್ ಯಾದವ್, ಚೊಚ್ಚಲ ಪಂದ್ಯದಲ್ಲೇ ಗಮನಾರ್ಹ ಪ್ರದರ್ಶನದ ಮೂಲಕ ವಿಶೇಷ ದಾಖಲೆಯ ಕ್ಲಬ್‌ಗೆ ಸೇರ್ಪಡೆಗೊಂಡರು.

ಇಂಡಿಯನ್ ಪ್ರೀಮಿಯರ್ ಲೀಗ್‌ನ ಕಳೆದ ಆವೃತ್ತಿಯಲ್ಲಿ ಭರ್ಜರಿ ಬೌಲಿಂಗ್​ ತೋರಿದ್ದ ಮಯಾಂಕ್ ಗಾಯದ ಬಳಿಕ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. 22ರ ಹರೆಯದ ಯುವ ಬೌಲರ್​​ ಮೊದಲ ಬಾರಿಗೆ ಭಾರತ ತಂಡದ ಜರ್ಸಿಯಲ್ಲಿ ಮೈದಾನಕ್ಕಿಳಿದರು. ಪವರ್‌ಪ್ಲೇಯ ಅಂತಿಮ ಓವರ್‌ನಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಚೆಂಡನ್ನು ಮಯಾಂಕ್ ಕೈಗಿತ್ತರು. ತಮ್ಮ ಚೊಚ್ಚಲ ಓವರ್​​ನಲ್ಲಿ ವೇಗ ಮತ್ತು ನಿಖರತೆ ಕಾಯ್ದುಕೊಂಡ ಮಯಾಂಕ್​, ಮೇಡನ್​ ಓವರ್​ ಮಾಡುವಲ್ಲಿ ಸಫಲರಾದರು. ಬ್ಯಾಟರ್​​ ತೌಹಿದ್ ಹೃದಯ್ ಒಂದೇ ಒಂದು ರನ್ ಗಳಿಸಲು ವಿಫಲವಾದರು. ಇದರಿಂದ ಟಿ20 ಮಾದರಿಯಲ್ಲಿ ತಾವಾಡಿದ ಮೊದಲ ಓವರ್‌ನಲ್ಲೇ ಮೇಡನ್​ ಮಾಡಿದ ಮೂರನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಮಯಾಂಕ್ ಪಾತ್ರರಾದರು.

ಐಪಿಎಲ್​ ಬಳಿಕ ಮತ್ತೊಮ್ಮೆ ವೇಗದ ಮೂಲಕ ಅಲೆ ಎಬ್ಬಿಸಿದ ಮಯಾಂಕ್, ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ 5.20ರ ಎಕಾನಮಿಯಲ್ಲಿ 21 ರನ್‌ ನೀಡಿ ಒಂದು ವಿಕೆಟ್​ ಕಿತ್ತರು. ಬಾಂಗ್ಲಾದೇಶದ ಅನುಭವಿ ಆಲ್‌ರೌಂಡರ್ ಮಹಮ್ಮದುಲ್ಲಾ ಅವರ ಮೊದಲ ಟಿ20 ಬಲಿಯಾದರು. ಮೊದಲ ಓವರ್‌ನಲ್ಲಿ 146.1 ಕಿ.ಮೀ ವೇಗದ ಎಸೆತದೊಂದಿಗೆ ಗ್ವಾಲಿಯರ್‌ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದರು.

ಮಯಾಂಕ್ ಜೊತೆಗೆ ಬೌಲಿಂಗ್​ನಲ್ಲಿ ಅರ್ಶದೀಪ್​ ಸಿಂಗ್​ ಹಾಗೂ ಸ್ಪಿನ್ನರ್​ ವರುಣ್​ ಚಕ್ರವರ್ತಿ ಮಿಂಚಿನ ದಾಳಿ ನಡೆಸಿ, ತಲಾ ಮೂರು ವಿಕೆಟ್​ ಪಡೆದರು. ಕರಾರುವಾಕ್​ ಬೌಲಿಂಗ್​ಗೆ ಸಿಲುಕಿದ ಬಾಂಗ್ಲಾ ತಂಡ 127 ರನ್‌ಗಳಿಗೆ ಆಲೌಟ್​ ಆಯಿತು. ಸಾಧಾರಣ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 11.5 ಓವರ್​ಗಳಲ್ಲೇ 3 ವಿಕೆಟ್​ ನಷ್ಟಕ್ಕೆ ಗೆಲುವಿನ ನಗೆ ಬೀರಿತು

ಮೊದಲ ಓವರ್​ ಮೇಡನ್​ ಮಾಡಿದವರು:ಮಾಜಿ ವೇಗದ ಬೌಲರ್​ ಅಜಿತ್​ ಅಗರ್ಕರ್ 2006ರಲ್ಲಿ ಜೋಹಾನ್ಸ್​ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಮೊದಲ ಓವರ್​ ಮೇಡನ್​ ಮಾಡಿದ್ದರು. ಈ ಸಾಧನೆ ಮಾಡಿದ ಮೊದಲ ಭಾರತೀಯರೆನಿಸಿದ್ದರು. ಆ ಬಳಿಕ 2022ರಲ್ಲಿ ಸೌತಾಂಪ್ಟನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮುಖಾಮುಖಿಯಲ್ಲಿ ಎಡಗೈ ವೇಗಿ ಅರ್ಶದೀಪ್​ ಈ ದಾಖಲೆ ಬರೆದ ಎರಡನೇ ಭಾರತೀಯರಾಗಿದ್ದಾರೆ.

ಇದನ್ನೂ ಓದಿ:T20 ಸರಣಿ: ಬಾಂಗ್ಲಾ ವಿರುದ್ಧ ಟೀಂ ಇಂಡಿಯಾಗೆ 7 ವಿಕೆಟ್​ಗಳ ಭರ್ಜರಿ ಜಯ - India vs Bangladesh

ABOUT THE AUTHOR

...view details