ನವದೆಹಲಿ:ಐಪಿಎಲ್ನಂತೆ ದೇಶೀಯ ಕ್ರಿಕೆಟ್ಗೂ ಆಟಗಾರರು ಆದ್ಯತೆ ನೀಡಬೇಕು ಎಂದು ಬಿಸಿಸಿಐ ಸೂಚಿಸಿದ್ದನ್ನು ಸ್ವಾಗತಿಸಿರುವ ಕ್ರಿಕೆಟಿಗ ಮನೋಜ್ ತಿವಾರಿ, ಈ ಬಗ್ಗೆ ನಾನು ತಿಂಗಳ ಹಿಂದೆಯೇ ಧ್ವನಿ ಎತ್ತಿದ್ದೆ. ಕೊನೆಗೂ ಈ ಬಗ್ಗೆ ಕ್ರಿಕೆಟ್ ಮಂಡಳಿ ನಿರ್ಧಾರಕ್ಕೆ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನಾನು ಈ ಬಗ್ಗೆ ಧ್ವನಿ ಎತ್ತದಿದ್ದರೆ, ಬಿಸಿಸಿಐ ಇಂಥದ್ದೊಂದು ನಿರ್ಧಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ ಎಂದು ಭಾವಿಸುತ್ತೇನೆ. ಬಹುಶಃ ಇದು ನನ್ನ ಪೋಸ್ಟ್ನಿಂದಾಗಿ ಸಾಧ್ಯವಾಗಿದೆ. ರಣಜಿ ಟೂರ್ನಿಯಲ್ಲಿ ಆಡಿ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಕ್ರಿಕೆಟಿಗರು ಮತ್ತೆ ರಣಜಿಯನ್ನು ಆಡುವುದಿಲ್ಲ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ಕ್ರೀಡಾ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಬಿಸಿಸಿಐ ಕಾರ್ಯದರ್ಶಿಗಳು ರಣಜಿ ಟೂರ್ನಿಯಲ್ಲೂ ಕ್ರಿಕೆಟಿಗರು ಆಡಬೇಕು ಎಂದು ಸೂಚಿಸಿದ್ದಾರೆ. ಇದನ್ನೇ ನಾನು ಈ ಹಿಂದೆ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದೆ. ರಣಜಿ ಟ್ರೋಫಿಯ ಮೂಲಕ ವೃತ್ತಿಜೀವನ ಕಂಡುಕೊಂಡ ಅನೇಕ ಆಟಗಾರರು, ಐಪಿಎಲ್,ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಯಶಸ್ವಿಯಾದ ನಂತರ ಅವರು ಮತ್ತೆ ರಣಜಿ ಟ್ರೋಫಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇದು ಕಳವಳಕಾರಿ ಸಂಗತಿ ಎಂದು ತಿವಾರಿ ಹೇಳಿದ್ದಾರೆ.
ಯುವ ಆಟಗಾರರು ಐಪಿಎಲ್‌ಗೆ ಮಾತ್ರ ಸೀಮಿತವಾಗುತ್ತಿದ್ದಾರೆ. ಐಪಿಎಲ್ ಬಳಿಕ ಬಿಡುವು ಸಿಕ್ಕಲ್ಲಿ ವಿದೇಶಗಳಿಗೆ ಪ್ರವಾಸ ತೆರಳುತ್ತಾರೆ. ದೇಶೀಯ ಕ್ರಿಕೆಟ್ನಲ್ಲಿ ಪಾಲ್ಗೊಳ್ಳದ ಕಾರಣ ಪ್ರತಿಷ್ಠಿತ ರಣಜಿ ಟ್ರೋಫಿಯ ಮಹತ್ವ ಕುಗ್ಗುತ್ತಿದೆ. ಐಪಿಎಲ್ ದೊಡ್ಡ ವೇದಿಕೆಯಾದರೂ, ರಣಜಿ ಟ್ರೋಫಿಯ ಮಹತ್ವವನ್ನು ಹೆಚ್ಚಿಸಲು ಬಿಸಿಸಿಐ ಅಧ್ಯಕ್ಷರು ಮತ್ತು ಕಾರ್ಯದರ್ಶಿಗೆ ವಿನಂತಿಸುತ್ತೇನೆ ಎಂದಿದ್ದಾರೆ.