ನವದೆಹಲಿ:ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರ ನಾಯಕ ಕೆಎಲ್ ರಾಹುಲ್ ಅವರ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದ ಬಗ್ಗೆ ತಂಡದ ಸಹಾಯಕ ಕೋಚ್ ಲ್ಯಾನ್ಸ್ ಕ್ಲೂಸೆನರ್ ಮೌನ ಮುರಿದಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಇದು ಚಹಾ ಕಪ್‌ನಲ್ಲಿ ಬಿರುಗಾಳಿ ಎದ್ದಿದೆ. ಇಬ್ಬರು ಕ್ರಿಕೆಟ್ ಪ್ರೇಮಿಗಳ ನಡುವಿನ ಈ ಚರ್ಚೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ತಂಡದಲ್ಲಿ ಈ ರೀತಿಯ ಸಂಭಾಷಣೆಗಳನ್ನು ನಾವು ಇಷ್ಟಪಡುತ್ತೇವೆ. ಇದು ತಂಡಗಳ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಇದು ನಮಗೆ ದೊಡ್ಡ ವಿಷಯವಲ್ಲ ಎಂದಿದ್ದಾರೆ.
ರಾಹುಲ್ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ಹೊಂದಿದ್ದಾರೆ, ಅದು ಅವರನ್ನು ಶ್ರೇಷ್ಠ ಕ್ರಿಕೆಟಿಗನನ್ನಾಗಿ ಮಾಡಿದೆ. ಈ ಐಪಿಎಲ್ ಅವರಿಗೆ ಕಷ್ಟಕರವಾಗಿತ್ತು. ಏಕೆಂದರೆ ನಮ್ಮ ತಂಡ ಪ್ರತಿ ಪಂದ್ಯದಲ್ಲೂ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಇತ್ತು ಇದರಿಂದಾಗಿ ಅವರಿಗೆ ಮುಕ್ತವಾಗಿ ಆಡಲು ಅವಕಾಶ ಸಿಗಲಿಲ್ಲ. ರಾಹುಲ್ ಈ ಆವೃತ್ತಿಯಲ್ಲಿ ಒಂದು ಅಥವಾ ಎರಡು ಶತಕಗಳನ್ನು ಬಾರಿಸಲು ಬಯಸಿದ್ದರು. ಆದರೆ ತಂಡದ ಕಳಪೆ ಆಟದಿಂದಾಗಿ ಅದು ಸಂಭವಿಸಲಿಲ್ಲ. ಅವರು ಶೀಘ್ರದಲ್ಲೇ ದೊಡ್ಡ ಇನ್ನಿಂಗ್ಸ್ ಆಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಲಕ್ನೋ ಸೂಪರ್‌ಜೈಂಟ್ಸ್ ತಂಡದ ನಾಯಕತ್ವದ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಮುಂದಿನ ಪಂದ್ಯಗಳನ್ನು ಗೆಲ್ಲುವುದರ ಮೇಲೆ ತಂಡದ ಸಂಪೂರ್ಣ ಗಮನವಿದೆ. ತಂಡ 12 ಪಂದ್ಯಗಳಲ್ಲಿ 6 ಗೆಲುವುಗಳೊಂದಿಗೆ ಏಳನೇ ಸ್ಥಾನದಲ್ಲಿದೆ, ಪ್ಲೇ ಆಫ್ ಭರವಸೆಯನ್ನು ಜೀವಂತವಾಗಿರಿಸಲು ಉಳಿದ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿರ್ವಾಯತೆ ಇದೆ ಹೀಗಾಗಿ ನಾವು ಈ ಬಗ್ಗೆ ಗಮನ ಹರಿಸಿದ್ದೇವೆ ಎಂದು ಹೇಳುವ ಮೂಲಕ ಇಷ್ಟು ದಿನ ಹುಟ್ಟಿಕೊಂಡಿದ್ದ ಹಲವು ವದಂತಿಗಳಿಗೆ ತೆರೆ ಎಳೆದಿದ್ದಾರೆ.