ಮುಂಬೈ (ಮಹಾರಾಷ್ಟ್ರ):18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ಸಿದ್ಧತೆ ಆರಂಭವಾಗಿದೆ. ಇದರ ಬೆನ್ನಲ್ಲೇ ಮೆಗಾ ಹರಾಜು ಪ್ರತಿಕ್ರಿಯೆ ಮತ್ತು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ತಂಡಗಳ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ, ಈ ಕುರಿತ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಹೊಣೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ವಹಿಸಲಾಗಿದೆ.
ಮುಂದಿನ ವರ್ಷದ ಜನಪ್ರಿಯ ಚುಟುಕು ಕ್ರಿಕೆಟ್ ಟೂರ್ನಿಗೆ ಮುಂಚಿತವಾಗಿ ನಡೆಯಲಿರುವ ಮೆಗಾ ಹರಾಜು ಹಾಗೂ ಇತರ ವಿಷಯಗಳ ಚರ್ಚಿಸಲು ಬುಧವಾರ ಬಿಸಿಸಿಐ ತನ್ನ ಪ್ರಧಾನ ಕಚೇರಿಯಲ್ಲಿ ಸಭೆ ಕರೆದಿತ್ತು. ಈ ಸಭೆಯ ಬಗ್ಗೆ ಕಾರ್ಯದರ್ಶಿ ಜಯ್ ಶಾ ಖಚಿತ ಪಡಿಸಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಐಪಿಎಲ್‌ನ ಮುಂಬರುವ ಋತುವಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು 10 ಫ್ರಾಂಚೈಸಿಗಳ ಮಾಲೀಕರೊಂದಿಗೆ ರಚನಾತ್ಮಕ ಸಂವಾದವನ್ನು ಆಯೋಜಿಸುತ್ತಿತ್ತು ಎಂದು ತಿಳಿಸಿದ್ದಾರೆ.
ಆಟಗಾರರ ನಿಯಮಗಳು ಮತ್ತು ಕೇಂದ್ರೀಯ ವ್ಯಾಪಾರೀಕರಣ, ಪರವಾನಗಿ ಹಾಗೂ ಆಟ ಸೇರಿದಂತೆ ಇತರ ವಾಣಿಜ್ಯ ಅಂಶಗಳು ಬಗ್ಗೆ ಫ್ರಾಂಚೈಸ್ ಮಾಲೀಕರು ತಮ್ಮ ಪ್ರತಿಕ್ರಿಯೆಗಳನ್ನು ಮಂಡಿಸಿದರು. ಬಿಸಿಸಿಐ ಈಗ ಐಪಿಎಲ್ ಆಟಗಾರರ ನಿಯಮಾವಳಿಗಳನ್ನು ರೂಪಿಸುವ ಮೊದಲು ಹೆಚ್ಚಿನ ಚರ್ಚೆ ಮತ್ತು ನಿರ್ಧಾರಕ್ಕಾಗಿ ಐಪಿಎಲ್ ಆಡಳಿತ ಮಂಡಳಿಗೆ ಈ ಶಿಫಾರಸು ಮಾಡಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮುಂದಿನ ಐಪಿಎಲ್‌ನಲ್ಲಿ ಒಂದು ರೈಟ್ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್‌ನೊಂದಿಗೆ ಐದಕ್ಕಿಂತ ಹೆಚ್ಚು ಆಟಗಾರರನ್ನು ಉಳಿಸಿಕೊಳ್ಳಲು ತಂಡಗಳಿಗೆ ಅವಕಾಶ ನೀಡುವ ಸಾಧ್ಯತೆ ಇಲ್ಲ. ಆರ್‌ಟಿಎಂ ಕಾರ್ಡ್ ಫ್ರಾಂಚೈಸಿಗೆ ಹಿಂದಿನ ಋತುವಿನ ತಮ್ಮ ತಂಡದ ಆಟಗಾರನ ಅಂತಿಮ ಬಿಡ್ಅನ್ನು ಹೊಂದಿಸಲು ಅವಕಾಶವನ್ನು ನೀಡುತ್ತಿತ್ತು. ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಜಯ್ ಶಾ, ಚರ್ಚಿಸಿದ ಎಲ್ಲ ಅಂಶಗಳ ಬಗ್ಗೆ ಮಂಡಳಿಯು ಶೀಘ್ರದಲ್ಲೇ ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎಂದು ಸ್ಪಪ್ಟಪಡಿಸಿದ್ದಾರೆ.
ಸಭೆಯಲ್ಲಿ ಪಾಲ್ಗೊಂಡಿದ್ದ ಮಾಲೀಕರು: ಬಿಸಿಸಿಐ ಕರೆದಿದ್ದ ಈ ಸಭೆಯಲ್ಲಿ ಐಪಿಎಲ್ ತಂಡಗಳು ಮಾಲೀಕರು, ಸಹ ಮಾಲೀಕರಲ್ಲಿ ಭಾಗವಹಿಸಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್‌ನ ಶಾರುಖ್ ಖಾನ್, ಸನ್‌ರೈಸರ್ಸ್ ಹೈದರಾಬಾದ್‌ನ ಕಾವ್ಯಾ ಮಾರನ್, ಪಂಜಾಬ್ ಕಿಂಗ್ಸ್‌ನ ನೆಸ್ ವಾಡಿಯಾ, ಲಖನೌ ಸೂಪರ್ ಜೈಂಟ್ಸ್‌ನ ಸಂಜೀವ್ ಗೋಯೆಂಕಾ ಅವರ ಮಗ ಶಾಶ್ವತ್, ಡೆಲ್ಲಿ ಕ್ಯಾಪಿಟಲ್ಸ್‌ನ ಕೆ.ಕೆ.ಗ್ರ್ಯಾಂಡ್ ಮತ್ತು ಪಾರ್ಥ್ ಜಿಂದಾಲ್ ಉಪಸ್ಥಿತರಿದ್ದರು.
ರಾಜಸ್ಥಾನ ರಾಯಲ್ಸ್‌ನ ಮನೋಜ್ ಬದಾಲೆ, ರಂಜಿತ್ ಬಾರ್ಥಕೂರ್, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪ್ರಥಮೇಶ್ ಮಿಶ್ರಾ, ಚೆನ್ನೈ ಸೂಪರ್ ಕಿಂಗ್ಸ್‌ನ ಕಾಸಿ ವಿಶ್ವನಾಥನ್ ಮತ್ತು ರೂಪಾ ಗುರುನಾಥ್, ಗುಜರಾತ್ ಟೈಟಾನ್ಸ್‌ನ ಅಮಿತ್ ಸೋನಿ ಪಾಲ್ಗೊಂಡಿದ್ದ ಮುಂಬೈ ಇಂಡಿಯನ್ಸ್ ಮಾಲೀಕರು ಆನ್‌ಲೈನ್ ಮೂಲಕ ಭಾಗವಹಿಸಿದ್ದರು.
ಮೆಗಾ ಹರಾಜು ಬಗ್ಗೆ ಬಿಸಿ ಚರ್ಚೆ: ಸಭೆಯಲ್ಲಿ ವಾಡಿಯಾ ಮತ್ತು ಶಾರುಖ್ ಖಾನ್ ಮೆಗಾ ಹರಾಜು ಮಾಡಬೇಕೇ ಅಥವಾ ಬೇಡವೇ ಎಂಬ ವಿಷಯದ ಬಗ್ಗೆ ಬಿಸಿ ಚರ್ಚೆ ನಡೆಸಿದರು. ಈ ಸಭೆಯಲ್ಲಿ ನಡೆದ ವಿಷಯಗಳ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್‌ನ ಮಾಲೀಕತ್ವದ ಜೆಎಸ್ಡಬ್ಲ್ಯೂ ಸ್ಪೋರ್ಟ್ಸ್‌ನ ನಿರ್ದೇಶಕ ಪಾರ್ಥ್ ಜಿಂದಾಲ್ ಮಾಹಿತಿ ನೀಡಿ, ಎಲ್ಲ ವಿಷಯಗಳ ಬಗ್ಗೆ ತಂಡಗಳು ತಮ್ಮ ಅಭಿಪ್ರಾಯಗಳಿಗೆ ಅಂಟಿಕೊಳ್ಳಲು ನೋಡಿದ್ದರಿಂದ ಸಭೆಯಿಂದ ಯಾವುದೇ ಫಲಿತಾಂಶ ಹೊರಬರಲಿಲ್ಲ ಎಂದು ಹೇಳಿದ್ದಾರೆ.
ಎಲ್ಲ ಮಾಲೀಕರಿಂದ ಅವರ ವಿಭಿನ್ನ ದೃಷ್ಟಿಕೋನಗಳನ್ನು ಆಲಿಸುವ ಸಭೆ ಮಾತ್ರ ಇದಾಗಿತ್ತು. ಬಿಸಿಸಿಐ ಎಲ್ಲವನ್ನೂ ಕೇಳಿದೆ. ಈಗ ಅವರೇ ನಮಗೆ ಎಲ್ಲ ನಿಯಮಗಳನ್ನು ನೀಡುತ್ತಾರೆ. ಆಗಸ್ಟ್ ಅಂತ್ಯದ ವೇಳೆಗೆ ಮುಂದಿನ ಆವೃತ್ತಿಯ ನಿಯಮಗಳು ಅಂತಿಮಗೊಳ್ಳುವ ನಿರೀಕ್ಷೆ ಇದೆ. ಇದೇ ವೇಳೆ, ಮೆಗಾ ಹರಾಜಿನ ಮೊದಲು ಉಳಿಸಿಕೊಳ್ಳಲು ಬಯಸುವ ಆಟಗಾರರ ಸಂಖ್ಯೆಯ ವಿಷಯ ತಂಡಗಳ ನಡುವೆ ಯಾವುದೇ ಒಮ್ಮತ ಮೂಡಿಲ್ಲ. ಕೆಲ ತಂಡಗಳಿಗೆ 8-10 ಆಟಗಾರರು ಬೇಕು. ಮತ್ತೆ ಕೆಲ ತಂಡಗಳಿಗೆ ನಾಲ್ವರು, ಇನ್ನೂ ಕೆಲ ತಂಡಗಳಿಗೆ ಆರು ಆಟಗಾರರು ಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ಇದೆಲ್ಲವೂ ಇನ್ನೂ ಚರ್ಚೆಯಲ್ಲಿದೆ ಎಂದು ವಿವರಿಸಿದ್ದಾರೆ.
ಮತ್ತೊಂದೆಡೆ, ಐಪಿಎಲ್‌ನಲ್ಲಿ ಹರಾಜು ಮಾಡಬೇಕೇ ಎಂಬ ಚರ್ಚೆ ನಡೆಯುತ್ತಿದೆ ಎಂಬುವುದನ್ನು ಡೆಲ್ಲಿ ಕ್ಯಾಪಿಟಲ್ಸ್‌ನ ಪಾರ್ಥ್ ಜಿಂದಾಲ್ ಬಹಿರಂಗ ಪಡಿಸಿದ್ದಾರೆ. ಹರಾಜು ಕುರಿತ ವಿಷಯದ ಬಗ್ಗೆ ಕೇಳಿದ ಪ್ರಶ್ನೆಗೆ, ಹೌದು, ನನಗೆ ಆಶ್ಚರ್ಯವಾಯಿತು. ಈ ಬಗ್ಗೆ ಚರ್ಚೆ ನಡೆಯಿತು. ಕೆಲವರು ಮೆಗಾ ಹರಾಜು ಮಾಡಬಾರದು. ಸಣ್ಣ ಹರಾಜುಗಳು ಮಾತ್ರ ಇರಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ಹರಾಜಿಗೆ ವಿರುದ್ಧವಾಗಿಲ್ಲ ಎಂದು ತಿಳಿಸಿದ್ದಾರೆ.
ನಾನು ಹರಾಜು ಬೇಡ ಎಂಬ ಕ್ಯಾಂಪ್ನಲ್ಲಿಲ್ಲ. ಹರಾಜು ಆಟದ ಮೈದಾನವನ್ನು ಸಮಗೊಳಿಸುತ್ತದೆ. ಇದು ಎಲ್ಲರಿಗೂ ತುಂಬಾ ಒಳ್ಳೆಯದು ಎಂದು ನಾನು ಭಾವಿಸುತ್ತೇನೆ. ಜೊತೆಗೆ ಇದು ಸ್ಪರ್ಧಾತ್ಮಕವಾಗಿಸುತ್ತದೆ. ಬಿಸಿಸಿಐ ಜಾಣ್ಮೆಯಿಂದ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಇಂಪ್ಯಾಕ್ಟ್ ಪ್ಲೇಯರ್ ಬಗ್ಗೆಯೂ ಚರ್ಚೆ: ಅಲ್ಲದೇ, ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಡೆಲ್ಲಿ ಕ್ಯಾಪಿಟಲ್ಸ್ ಈ ನಿಯಮಕ್ಕೆ ವಿರುದ್ಧವಾಗಿದೆ ಎಂಬ ಜಿಂದಾಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಮತ್ತೆ ವಿವಿಧ ಜನರಿಂದ ವಿಭಿನ್ನ ದೃಷ್ಟಿಕೋನಗಳು ಹೊರಹೊಮ್ಮಿದವು. ಕೆಲವರು ಇದನ್ನು ಬಯಸುತ್ತಾರೆ. ಏಕೆಂದರೆ, ಇದು ಯುವ ಆಟಗಾರರಿಗೆ ಐಪಿಎಲ್‌ನಲ್ಲಿ ಆಡಲು ಅವಕಾಶ ನೀಡುತ್ತದೆ. ಕೆಲವರು ಅದನ್ನು ಬಯಸುವುದಿಲ್ಲ. ಯಾಕೆಂದರೆ, ಆಲ್ ರೌಂಡರ್‌ಗಳ ಬೆಳವಣಿಗೆಯ ದೃಷ್ಟಿಯಿಂದ ಇದು ಭಾರತೀಯ ಕ್ರಿಕೆಟ್‌ಗೆ ಹಾನಿಕಾರಕ. ಹೀಗಾಗಿ ಈ ಬಗ್ಗೆ ಮಿಶ್ರ ಅಭಿಪ್ರಾಯ ಕೇಳಿಬಂದಿದೆ. ನಮಗೂ ಈ ನಿಯಮ ಬೇಡ. ಇದು ಭಾರತೀಯ ಕ್ರಿಕೆಟ್‌ಗೆ ಒಳ್ಳೆಯದಲ್ಲ. ಕ್ರಿಕೆಟ್ 11 ವರ್ಸಸ್ 11 ಆಗಿರುವುದರಿಂದ ನಾನು ಆಟಕ್ಕೆ ಆದ್ಯತೆ ನೀಡುತ್ತೇನೆ. ಆಲ್ ರೌಂಡರ್‌ಗಳು ಬಹಳ ಮುಖ್ಯ ಎಂದು ಮಾಹಿತಿ ಹಂಚಿಕೊಂಡರು.
ಪಂಜಾಬ್ ಕಿಂಗ್ಸ್‌ನ ವಾಡಿಯಾ ಮಾತನಾಡಿ, ಇದೊಂದು ಉತ್ತಮ ಸಭೆಯಾಗಿದ್ದು, ಬಿಸಿಸಿಐ ಜತೆ ಚರ್ಚೆ ನಡೆಸುತ್ತಿರುವುದಕ್ಕೆ ಸಂತಸವಾಗಿದೆ. ಸಾಗರೋತ್ತರ (ವಿದೇಶಿ) ಆಟಗಾರರ ಲಭ್ಯತೆಯ ವಿಷಯವನ್ನೂ ಚರ್ಚಿಸಲಾಗಿದೆ. ಹರಾಜು, ಆಟಗಾರರು, ಅನ್‌ಕ್ಯಾಪ್ಡ್ ಆಟಗಾರರ ಬಗ್ಗೆಯೂ ಚರ್ಚಿಸಿದ್ದೇವೆ. ಏನೇ ಆದರೂ ಅಭಿಮಾನಿಗಳು, ಆಟಗಾರರು ಮತ್ತು ಎಲ್ಲ ಪಾಲುದಾರರ ಪರವಾಗಿಯೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:ಏಷ್ಯನ್ ಕ್ರಿಕೆಟ್ ಮಂಡಳಿ: ಜಯ್ ಶಾ ಸ್ಥಾನಕ್ಕೆ ಪಾಕ್ ಕ್ರಿಕೆಟ್ ಮಂಡಳಿಯ ಹಾಲಿ ಅಧ್ಯಕ್ಷ ಮೊಹ್ಸಿನ್ ನಖ್ವಿ? - Asian Cricket Council president