ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಇಂದಿನ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ರೋಚಕ ಕದನಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸುತ್ತಿದೆ. ಈ ಪಂದ್ಯ ಉಭಯ ತಂಡಗಳ ಪಾಲಿಗೆ ಮಾಡು ಇಲ್ಲವೇ ಮನೆಗೆ ನಡಿ ಆಗಿದೆ. ಗೆದ್ದ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ 2ನೇ ಕ್ವಾಲಿಫೈಯರ್ ಆಡಲಿದೆ.
ಒಂದೆಡೆ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಅಬ್ಬರಿಸಿ ಅಗ್ರಸ್ಥಾನಕ್ಕೇರಿದ್ದ ರಾಜಸ್ಥಾನ್ ತನ್ನ ಕೊನೆಯ ನಾಲ್ಕು ಪಂದ್ಯಗಳಲ್ಲಿ ಮುಗ್ಗರಿಸಿ 3ನೇ ಸ್ಥಾನಕ್ಕೆ ತಲುಪಿದೆ. ಅದರಲ್ಲೂ ಕೊನೆಯ ಪಂದ್ಯ ಮಳೆಯಿಂದ ರದ್ದಾಗಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮತ್ತೊಂದೆಡೆ, ಆರಂಭಿಕ 8 ಪಂದ್ಯಗಳ ಪೈಕಿ ಕೇವಲ 1ರಲ್ಲಿ ಗೆದ್ದು 7 ಪಂದ್ಯಗಳನ್ನು ಸೋತಿದ್ದ ಆರ್‌ಸಿಬಿ ಪ್ಲೇ ಆಫ್ಗೆ ತಲುಪುವುದೇ ಕಷ್ಟ ಎಂದು ಹೇಳಲಾಗಿತ್ತು. ಆದರೆ ಆ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದ ತಂಡ, ಸತತ ಆರು ಪಂದ್ಯಗಳಲ್ಲಿ ಗೆದ್ದು ಪ್ಲೇ ಆಫ್ ತಲುಪಿ ಇತಿಹಾಸ ಸೃಷ್ಠಿಸಿದೆ.
ಆರ್‌ಸಿಬಿ ಆಲ್ರೌಂಡರ್ ಪ್ರದರ್ಶನ:ಕಳೆದ ಆರು ಪಂದ್ಯಗಳಲ್ಲಿ ಆರ್‌ಸಿಬಿ ಸಂಘಟಿತ ಹೋರಾಟದಿಂದ ಎದುರಾಳಿಗಳನ್ನು ಕಂಗೆಡಿಸಿದೆ. ಬ್ಯಾಟಿಂಗ್ ವಿಭಾಗದಲ್ಲಿ ಕೊಹ್ಲಿ, ನಾಯಕ ಫಾಪ್ ಡುಪ್ಲೆಸಿಸ್, ರಜತ್ ಪಾಟೀದಾರ್ ಭರ್ಜರಿ ಫಾರ್ಮ್ನಲ್ಲಿದ್ದರೆ, ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾ ತಾರೆಗಳಾದ ಗ್ರೀನ್, ಮ್ಯಾಕ್ಸ್‌ವೆಲ್ ಫಾರ್ಮ್ಗೆ ಮರಳಿದ್ದು ಎದುರಾಳಿ ತಂಡಗಳನ್ನು ಕಾಡುತ್ತಿದ್ದಾರೆ. ಮತ್ತೊಂದೆಡೆ, ಬೌಲರ್‌ಗಳು ಲಯಕ್ಕೆ ಮರಳಿದ್ದು, ಬಲಿಷ್ಠ ತಂಡಗಳನ್ನು ಕಟ್ಟಿ ಹಾಕಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
ಹೆಡ್ ಟು ಹೆಡ್:ಆರ್‌ಸಿಬಿ ಮತ್ತು ಆರ್‌ಆರ್ ಇದುವರೆಗೆ ಒಟ್ಟು 31 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಬೆಂಗಳೂರು 15 ಬಾರಿ ಸಾಧಿಸಿದ್ದರೆ, ರಾಜಸ್ಥಾನ್ 13 ಬಾರಿ ಗೆದ್ದಿದೆ. 3 ಪಂದ್ಯಗಳು ರದ್ದಾಗಿವೆ. ಆರ್‌ಸಿಬಿ ವಿರುದ್ದ ರಾಜಸ್ಥಾನದ ಗರಿಷ್ಠ ಸ್ಕೋರ್ 217, ಆರ್‌ಸಿಬಿ ಸ್ಕೋರ್ 200 ಆಗಿದೆ.
ಪಿಚ್ ಹೇಗಿದೆ?:ಅಹಮದಾಬಾದ್ ಪಿಚ್ ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳಿಗೆ ಸಾಕಷ್ಟು ಅನುಕೂಲಕರವಾಗಿದ್ದರೂ ಈ ಪಿಚ್‌ನಲ್ಲಿ ಬೌಲರ್‌ಗಳೂ ಪ್ರಾಬಲ್ಯ ಸಾಧಿಸಿರುವ ಉದಾಹರಣೆಗಳಿವೆ. ಇಲ್ಲಿ ಆಡಿದ ಈ ವರ್ಷದ ಐಪಿಎಲ್‌ನ ಏಳು ಪಂದ್ಯಗಳ ಪೈಕಿ ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ. 233/3 ಗರಿಷ್ಠ ಸ್ಕೋರ್ ಆಗಿದ್ದರೆ 89 ಕನಿಷ್ಠ ಸ್ಕೋರ್ ಆಗಿದೆ.