ಜೈಪುರ :ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ನಾಯಕ ರಿಷಭ್ ಪಂತ್ ತಮ್ಮ 100ನೇ ಪಂದ್ಯವನ್ನು ಆಡುತ್ತಿದ್ದಾರೆ. ಈ ಮೂಲಕ ಡೆಲ್ಲಿಗಾಗಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಂತ್ ಪಾತ್ರರಾಗಿದ್ದಾರೆ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಇಂದು ಡೆಲ್ಲಿ ಮತ್ತು ರಾಜಸ್ಥಾನ ತಂಡಗಳು ಮುಖಾಮುಖಿಯಾಗಿವೆ.
2016 ರಲ್ಲಿ ಹರಾಜು ಪ್ರಕ್ರಿಯೆಯಲ್ಲಿ 1.90 ಕೋಟಿ ರೂ. ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ಗೆ (ಹಿಂದೆ ಡೆಲ್ಲಿ ಡೇರ್‌ಡೆವಿಲ್ಸ್ ಎಂದು ಕರೆಯಲಾಗುತ್ತಿತ್ತು.) ಆಯ್ಕೆಯಾದ ಪಂತ್, ಇಂದು ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಅಲ್ಲದೇ, 2021 ರಿಂದ ನಾಯಕತ್ವ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತಿಕೊಂಡಿದ್ದಾರೆ. ಆದರೆ, ಕಳೆದ ವರ್ಷ ನಡೆದ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕ್ರಿಕೆಟ್ ನಿಂದ ದೂರ ಉಳಿಸಿದ್ದರು. ಈ ಬಾರಿ ಐಪಿಎಲ್ 2024ರ 17ನೇ ಆವೃತ್ತಿಯ ಮೂಲಕ ಕ್ರಿಕೆಟ್ಗೆ ಮರಳಿರುವ ಪಂತ್ ಡೆಲ್ಲಿಗಾಗಿ ನೂರನೇ ಪಂದ್ಯವಾಡುತ್ತಿರುವುದು ವಿಶೇಷವಾಗಿದೆ.
ಇನ್ನುಳಿದಂತೆ ಐಪಿಎಲ್ನಲ್ಲೇ ಅತಿ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿರುವ ಲೆಗ್ ಸ್ಪಿನ್ನರ್ ಚತುರ ಅಮಿತ್ ಮಿಶ್ರಾ (99), ಪ್ರಸ್ತುತ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ (87), ಆಸ್ಟ್ರೇಲಿಯಾದ ಬ್ಯಾಟರ್ ಡೇವಿಡ್ ವಾರ್ನರ್ (82) ಹಾಗೂ ಭಾರತದ ತಂಡ ಸ್ಟಾರ್ ಓಪನರ್ ವೀರೇಂದ್ರ ಸೆಹ್ವಾಗ್ (79) ಡೆಲ್ಲಿ ತಂಡವನ್ನು ಹೆಚ್ಚು ಬಾರಿ ಪ್ರತಿನಿಧಿಸಿರುವವರ ಪಟ್ಟಿಯಲ್ಲಿದ್ದಾರೆ.
ಐಪಿಎಲ್ ನಲ್ಲಿ ಪಂತ್ ಮೋಡಿ : ಪಂತ್ ಆಡಿರುವ 99 ಪಂದ್ಯಗಳಲ್ಲಿ ಒಂದು ಶತಕ ಮತ್ತು 15 ಅರ್ಧ ಶತಕಗಳೊಂದಿಗೆ ಸರಾಸರಿ 34.40 ರ 147.90 ರ ಸ್ಟ್ರೈಕ್ ರೇಟ್‌ನಲ್ಲಿ 2,856 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 2018 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಔಟಾಗದೇ 128* ಆಗಿದೆ. ಇದು ಪಂತ್ ಅವರ ಮುಂದಿನ ಕ್ರಿಕೆಟ್ ಪ್ರಯಾಣಕ್ಕೆ ಸಾಕ್ಷಿಯಾಗಿತ್ತು. ಅದೇ ವರ್ಷ ಆಗಸ್ಟ್ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಕ್ರೀಸ್ಗೆ ಬಂದ ತಕ್ಷಣವೇ ತಮ್ಮ ರನ್ ಖಾತೆ ತೆರೆಯಲು ಮೊದಲು ಚೆಂಡನ್ನು ಸಿಕ್ಸರ್ಗೆ ಅಟ್ಟಿದ್ದರು. ಇದು ಪಂತ್ ಆಟದ ಶೈಲಿಯನ್ನು ಹೇಳುತ್ತದೆ.