ಹೈದರಾಬಾದ್: ಕಾನ್ಪುರದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತದೆ. ಮೊದಲ ದಿನ, 35 ಓವರ್‌ಗಳ ಆಟವಷ್ಟೇ ನಡೆಸಲಾಯಿತು. ನಿರಂತರ ಮಳೆಯಾದ ಕಾರಣ ಪಂದ್ಯವನ್ನು ಅಲ್ಲಿಗೆ ಮುಗಿಸಲಾಯಿತು. ಇಂದು ಎರಡನೇ ದಿನ ಕೂಡ ವರುಣನ ಆರ್ಭಟ ಮುಂದುವರೆದಿದ್ದು ಒಂದೇ ಒಂದು ಎಸೆತ ಕಾಣದೇ 2ನೇ ದಿನದ ಪಂದ್ಯವೂ ಮಳೆಗಾಹುತಿಯಾಗಿದೆ.
ಸದ್ಯ 35 ಓವರ್ಗಳನ್ನು ಆಡಿರುವ ಬಾಂಗ್ಲಾ 3 ವಿಕೆಟ್ ನಷ್ಟಕ್ಕೆ 107 ರನ್ಗಳನ್ನು ಕಲೆ ಹಾಕಿದೆ. ಇನ್ನೂ ಮೂರು ದಿನಗಳ ಆಟ ಬಾಕಿ ಉಳಿದಿದೆ. ಒಂದು ವೇಳೆ ಮಳೆಯಿಂದಾಗಿ ಈ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೆ ಟೀಂ ಇಂಡಿಯಾ 1-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಳ್ಳಲಿದೆ. ಆದರೆ, ಈ ಪಂದ್ಯ ರದ್ದಾದರೂ ಅಥವಾ ಡ್ರಾದಲ್ಲಿ ಅಂತ್ಯಗೊಂಡರೂ ಭಾರತದ WTC ಫೈನಲ್ ಅರ್ಹತೆ ಮೇಲೆ ಪೆಟ್ಟಾಗಲಿದೆಯೇ ಮತ್ತು ಭಾರತ ಇನ್ನೂ ಎಷ್ಟು ಪಂದ್ಯಗಳಲ್ಲಿ ಗೆದ್ದರೇ ಫೈನಲ್‌ಗೆ ಅರ್ಹತೆ ಪಡೆಯಲಿದೆ ಎಂಬುದರ ಬಗ್ಗೆ ಇದೀಗ ತಿಳಿಯೋಣ ಬನ್ನಿ.
2023-25ರ WTC ಋತುವಿನಲ್ಲಿ ಭಾರತ ಇದುವರೆಗೆ 10 ಪಂದ್ಯಗಳನ್ನು ಆಡಿ ಅದರಲ್ಲಿ 7ರಲ್ಲಿ ಗೆದ್ದು 2 ಪಂದ್ಯಗಳಲ್ಲಿ ಸೋಲನುಭವಿಸಿದೆ. ಮತ್ತೊಂದು ಪಂದ್ಯ ಡ್ರಾಗೊಂಡಿದೆ. ಇದರೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಪ್ರಸ್ತುತ ಶೇ.71.67 (86 ಅಂಕ)ದೊಂದಿಗೆ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ 12 ಪಂದ್ಯಗಳಲ್ಲಿ 8 ಗೆಲುವು ದಾಖಲಿಸಿ 62.50 ಶೇಕಡವಾರು (90 ಅಂಕ)ದೊಂದಿಗೆ ಎರಡನೇ ಸ್ಥಾನದಲ್ಲಿದೆ.